ತನ್ನ ಗ್ರಾಹಕನ ಎಟಿಎಂ ಕಾರ್ಡ್ನ್ನು ತಪ್ಪಾಗಿ ವಿಚ್ಛೇದಿತ ಪತ್ನಿಯ ವಿಳಾಸಕ್ಕೆ ಕಳುಹಿಸಿದ ಕಾರಣಕ್ಕೆ ಅಹಮದಾಬಾದ್ನ ಬ್ಯಾಂಕ್ ಒಂದು ಪೇಚಿಗೆ ಸಿಲುಕಿದೆ. ವಿನೋದ್ ಭಾಯ್ ಜೋಶಿಯವರಿಗೆ ಸೇರಬೇಕಾದ ಎಟಿಎಂ ಕಾರ್ಡ್ನ್ನು ಆ್ಯಕ್ಸಿಸ್ ಬ್ಯಾಂಕ್ ತಪ್ಪಾಗಿ ಅವರ ವಿಚ್ಚೇದಿತ ಪತ್ನಿಯ ವಿಳಾಸಕ್ಕೆ ಕಳುಹಿಸಿತ್ತು. ಈ ಸಂಬಂಧ ವಿಚಾರಣೆ ಆಲಿಸಿದ ಗುಜರಾತ್ ಗ್ರಾಹಕ ವಿವಾದ ಪರಿಹಾರ ಆಯೋಗವು ಕಾರ್ಡ್ನಿಂದ ಡ್ರಾ ಮಾಡಲಾದ 1.66 ಲಕ್ಷ ರೂಪಾಯಿಗಳನ್ನು 7 ಪ್ರತಿಶತ ಬಡ್ಡಿಯೊಂದಿಗೆ ಜೋಶಿಗೆ ಪಾವತಿಸುವಂತೆ ಆ್ಯಕ್ಸಿಕ್ ಬ್ಯಾಂಕ್ಗೆ ನಿರ್ದೇಶನ ನೀಡಿದೆ.
ಕಾಲೋಲ್ ಪಟ್ಟಣದ ನರ್ದಿಪುರದ ನಿವಾಸಿಯಾಗಿದ್ದ ಜೋಶಿ ಆ್ಯಕ್ಸಿಸ್ ಬ್ಯಾಂಕ್ನಲ್ಲಿ ತಮ್ಮ ಪುತ್ರನ ಜೊತೆಗೆ ಜಂಟಿ ಖಾತೆಯನ್ನು ಹೊಂದಿದ್ದರು. ಡೆಬಿಟ್ ಕಾರ್ಡ್ನ್ನು ಪುತ್ರ ಹಾಗೂ ತಂದೆ ಇಬ್ಬರೂ ಬಳಕೆ ಮಾಡುತ್ತಿದ್ದರು. ತಮ್ಮ ಕಾರ್ಡ್ನ್ನು ಕಳೆದುಕೊಂಡ ಬಳಿಕ 2009ರ ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್ ಹೊಸ ಕಾರ್ಡ್ನ್ನು ಕಳುಹಿಸಿಕೊಟ್ಟಿತ್ತು. ಆದರೆ ಈ ಹೊಸ ಕಾರ್ಡ್ ಜೋಶಿ ಕೈ ಸೇರಿರಲಿಲ್ಲ.
2010ರ ಆಗಸ್ಟ್ 26ರಂದು ಜೋಶಿ ಚೆಕ್ನ ಮೂಲಕ 10 ಸಾವಿರ ರೂಪಾಯಿ ಡ್ರಾ ಮಾಡಲು ಮುಂದಾದಾಗ ಖಾತೆಯಲ್ಲಿ ಅಷ್ಟೊಂದು ಹಣ ಇಲ್ಲ ಎಂಬ ವಿಚಾರ ಜೋಶಿ ಗಮನಕ್ಕೆ ಬಂದಿದೆ. ಈ ಬಗ್ಗೆ ವಿಚಾರಣೆ ಮಾಡಿ ನೋಡಿದಾಗ ಬ್ಯಾಂಕ್ 2009ರಲ್ಲಿ ಹೊಸ ಕಾರ್ಡ್ನ್ನು ಜೋಶಿಯ ವಿಚ್ಚೇದಿತ ಪತ್ನಿಯ ವಿಳಾಸಕ್ಕೆ ಕಳುಹಿಸಿದೆ ಎಂದು ತಿಳಿದುಬಂದಿದೆ.
ಡೆಬಿಟ್ ಕಾರ್ಡ್ನಿಂದ ಬ್ಯಾಂಕ್ನಲ್ಲಿದ್ದ 1,66,900 ರೂಪಾಯಿ ಹಣವನ್ನು ಡ್ರಾ ಮಾಡಲಾಗಿತ್ತು. ಈ ಬಳಿಕ ನ್ಯಾಯಕ್ಕಾಗಿ ಜೋಶಿ ಗ್ರಾಹಕರ ವಿವಾದ ಪರಿಹಾರ ವೇದಿಕೆ ಮೆಟ್ಟಿಲೇರಿದ್ದರು.
ಈ ಸಂಬಂಧ ವಿಚಾರಣೆ ಆಲಿಸಿದ ಆಯೋಗವು ಈ ಎಲ್ಲಾ ಪ್ರಮಾದಗಳಿಗೆ ಬ್ಯಾಂಕ್ ಸಿಬ್ಬಂದಿಯೇ ನೇರ ಕಾರಣ. ಹೀಗಾಗಿ ಈ ಹಣವನ್ನು ಜೋಶಿ ಖಾತೆಗೆ ಹಾಕುವಂತೆ ಬ್ಯಾಂಕ್ಗೆ ನಿರ್ದೇಶನ ನೀಡಲಾಗಿದೆ.