ಅಹಮದಾಬಾದ್: ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಇರುವ ಬೆನ್ನಲ್ಲೇ ಗುಜರಾತ್ನ ರಾಜಕೀಯದಲ್ಲಿ ಬಂಡಾಯದ ಬಿಸಿ ತಟ್ಟಿದೆ. ರಾಜಕೀಯ ದೊಂಬರಾಟ ಶುರುವಾಗಿದೆ. ಒಟ್ಟು 182 ಕ್ಷೇತ್ರಗಳ ಪೈಕಿ 166 ಸ್ಥಾನಗಳಿಗೆ ಬಿಜೆಪಿ ಈಗಾಗಲೇ ಅಭ್ಯರ್ಥಿಗಳ ಹೆಸರು ಘೋಷಿಸಿದ ಬೆನ್ನಲ್ಲೇ ಈಗ ಬಂಡಾಯ ಪರ್ವ ಶುರುವಾಗಿದೆ.
ಹಲವು ಶಾಸಕರನ್ನು ಕೈಬಿಟ್ಟು ಹೊಸ ಮುಖಗಳಿಗೆ ಟಿಕೆಟ್ ಕೊಟ್ಟಿರುವ ಬಿಜೆಪಿಗೆ ಬುದ್ಧಿ ಕಲಿಸಲು ನಾಯಕರು ಮುಂದಾಗಿದ್ದಾರೆ. ಟಿಕೆಟ್ ಕೈತಪ್ಪಿದ್ದರಿಂದ ಆಕ್ರೋಶ ಗೊಂಡಿರುವ ಅನೇಕ ನಾಯಕರು ಹಾಗೂ ಅವರ ಬೆಂಬಲಿಗರು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.
ಒಟ್ಟು ಐವರು ಈಗಾಗಲೇ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದು, ಸ್ವತಂತ್ರವಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಪ್ರಬಲ ಬುಡಕಟ್ಟು ನಾಯಕ ಹರ್ಷದ್ ವಸಾವ ಇದಾಗಲೇ ನಾಂದೋಡ್ ಕ್ಷೇತ್ರದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ಬಂಡಾಯ ಶಾಸಕರ ಮನವೊಲಿಸುವುದೇ ಆಡಳಿತಾರೂಢ ಬಿಜೆಪಿಗೆ ಅತೀದೊಡ್ಡ ಸವಾಲಾಗಿ ಪರಿಣಮಿಸಿದೆ.
ಬಿಜೆಪಿ ಒಂದು ಕುಟುಂಬವಿದ್ದಂತೆ. ಈ ಕುಟುಂಬದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಎಲ್ಲರೂ ಪಕ್ಷದ ಗೆಲುವಿಗಾಗಿ ಶ್ರಮಿಸಲಿದ್ದೇವೆ ಎಂದು ನಾಯಕ ಸಾಂಘ್ವಿ ಹೇಳುತ್ತಿದ್ದರೂ ರಾಜಕೀಯ ಬಿಕ್ಕಟ್ಟು ಸದ್ಯ ತಲೆದೋರಿದೆ.
ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ರವಿವಾರ ಪಕ್ಷದ ರಾಷ್ಟ್ರೀ ಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಗುಜರಾತ್ ಚುನಾವಣೆ, ದಿಲ್ಲಿ ಎಂಸಿಡಿ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆ ಕುರಿತು ಇಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ.