2022ರ ಮೇ 7ನೇ ತಾರೀಖಿನಿಂದ 2023ರವರೆಗೆ ಥಿಯೇಟರ್ನಲ್ಲಿ ಬರೋಬ್ಬರಿ 777 ಸಿನಿಮಾಗಳನ್ನು ವೀಕ್ಷಿಸುವ ಮೂಲಕ ಅಮೆರಿಕದ ವ್ಯಕ್ತಿಯೊಬ್ಬರು ಒಂದು ವರ್ಷದ ಅವಧಿಯಲ್ಲಿ ಚಿತ್ರಮಂದಿರದಲ್ಲಿ ಅತೀ ಹೆಚ್ಚು ಸಿನಿಮಾ ವೀಕ್ಷಿಸಿದ ವ್ಯಕ್ತಿ ಎಂಬ ಗಿನ್ನೆಸ್ ದಾಖಲೆಯನ್ನು ಬರೆದಿದ್ದಾರೆ.
ಪೆನ್ಸಿಲ್ವೆನಿಯಾದ ಕಾರ್ಲಿಸ್ಲಿ ನಗರದವರಾದ ಜಕರಿಯಾ ಸ್ವೋಪ್ Minions: Rise of Gru ಎಂಬ ಸಿನಿಮಾ ವೀಕ್ಷಿಸೋ ಮೂಲಕ ಈ ಮ್ಯಾರಥಾನ್ ಆರಂಭಿಸಿದ್ರು. ಒಂದು ವರ್ಷದ ಬಳಿಕ ಇಂಡಿಯಾನಾ ಜೋನ್ಸ್ ಹಾಗೂ ಡಯಲ್ ಆಫ್ ಡೆಸ್ಟಿನಿ ಸಿನಿಮಾ ನೋಡುವ ಮೂಲಕ ತಮ್ಮ ಮೂವಿ ಮ್ಯಾರಥಾನ್ ಪೂರ್ಣಗೊಳಿಸಿದ್ದಾರೆ.
32 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಸ್ಪೈಡರ್ ಮ್ಯಾನ್ ಸಿನಿಮಾವನ್ನು ಬರೋಬ್ಬರಿ 292 ಬಾರಿ ವೀಕ್ಷಿಸಿದ್ದರಂತೆ. ಇದರಿಂದ ಸ್ಪೂರ್ತಿ ಪಡೆದ ಸ್ವೋಪ್ ತಾನು ಹೇಗಾದರೂ ಮಾಡಿ 2018ರಲ್ಲಿ 715 ಸಿನಿಮಾ ವೀಕ್ಷಿಸಿ ಗಿನ್ನೆಸ್ ದಾಖಲೆ ಬರೆದಿದ್ದ ವಿನ್ಸೆಂಟ್ ಕ್ರೋನ್ ವಿಶ್ವ ದಾಖಲೆ ಮುರಿಯಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಸರಿ ಸುಮಾರು 800 ಸಿನಿಮಾಗಳನ್ನು ವೀಕ್ಷಿಸಲು ಜಕರಿಯಾ ಸಾವಿರಾರು ಡಾಲರ್ ಖರ್ಚು ಮಾಡಬೇಕಿತ್ತು. ಹೀಗಾಗಿ ಹ್ಯಾರಿಸ್ಬರ್ಗ್ನಲ್ಲಿರುವ ರೀಗಲ್ ಸಿನಿಮಾಸ್ನಲ್ಲಿ ಅನಿಯಮಿತ ಸದಸ್ಯತ್ವ ಪಡೆಯುವ ಮೂಲಕ ಹಣ ಉಳಿತಾಯ ಮಾಡಿದ್ರು. 777 ಸಿನಿಮಾಗಳನ್ನು ವೀಕ್ಷಿಸೋಕೆ ಜಕರಿಯಾ 300 ಡಾಲರ್ ಮಾತ್ರ ಖರ್ಚು ಮಾಡಿದ್ದಾರೆ. ಈ ರೀತಿ ಥಿಯೇಟರ್ಗಳಲ್ಲಿ ಹಲವಾರು ಸಿನಿಮಾಗಳನ್ನು ವೀಕ್ಷಿಸೋದು ಮಾನಸಿಕವಾಗಿ ಚಾಲೆಂಜಿಂಗ್ ಆಗಿರುತ್ತೆ ಅಂತಾ ಜಕರಿಯಾ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.