ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಕಠಿಣ ಲಾಕ್ಡೌನ್ ಜಾರಿಯಾಗಿದ್ದು, ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.
ಈ ಮೊದಲು ಕೊರೋನಾ ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಹೋಗಲು ಅಡ್ಡಿ ಇಲ್ಲವೆಂದು ಹೇಳಲಾಗಿತ್ತು. ಮಾರ್ಗಸೂಚಿ ಬದಲಿಸಿದ್ದು, ಕೊರೋನಾ ಲಸಿಕಾ ಕೇಂದ್ರಕ್ಕೆ ಲಸಿಕೆ ಪಡೆಯಲು ಹೋಗುವವರು ಮೊದಲೇ ಆನ್ಲೈನ್ ನಲ್ಲಿ ನೋಂದಣಿ ಮಾಡಿಸಿದ ಎಸ್ಎಂಎಸ್ ಹೊಂದಿರಬೇಕು. ಅಂಥವರಿಗೆ ಮಾತ್ರ ಲಸಿಕಾ ಕೇಂದ್ರಕ್ಕೆ ಹೋಗಲು ಅವಕಾಶ ನೀಡಲಾಗಿದೆ.
ಬ್ಯಾಂಕ್ ಮತ್ತು ವಿಮೆ ಕಚೇರಿಗಳಲ್ಲಿ ಶೇಕಡ 50 ರಷ್ಟು ಉದ್ಯೋಗಿಗಳೊಂದಿಗೆ ಕಾರ್ಯ ನಿರ್ವಹಿಸಬಹುದು. ಶೇಕಡ 50 ರಷ್ಟು ಎಟಿಎಂಗಳು ಕಾರ್ಯಾಚರಣೆ ನಡೆಸಬಹುದು.
ಇ-ಕಾಮರ್ಸ್ ಸಂಸ್ಥೆಗಳು ಅಗತ್ಯ ವಸ್ತುಗಳನ್ನು ಮಾತ್ರ ಮನೆಗಳಿಗೆ ತಲುಪಿಸಬಹುದು. ವಸ್ತುಗಳ ಹೋಮ್ ಡೆಲಿವರೆಗೂ ಇದು ಅನ್ವಯವಾಗುತ್ತದೆ.
ಇನ್ನುನಿಗದಿಯಾದ ಮದುವೆಗಳಿಗೆ 40 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದಕ್ಕೆ ತಹಶೀಲ್ದಾರ್ ಅನುಮತಿ, ಪಾಸ್ ಪಡೆದುಕೊಂಡು ಮದುವೆ ಮಾಡಬಹುದು.
ಸ್ಟೀಲ್ ಇಂಡಸ್ಟ್ರಿಗೆ ಸಂಬಂಧಿಸಿದ ಮೈನಿಂಗ್, ಸಿಮೆಂಟ್ ಉತ್ಪಾದನೆಗೆ ಅವಶ್ಯಕವಾದ ಕಚ್ಚಾ ವಸ್ತು ಪೂರೈಕೆಗೆ ಅನುಮತಿ ನೀಡಲಾಗಿದೆ ಎಂದು ಹೇಳಲಾಗಿದೆ.