ಬೆಂಗಳೂರು: ರಾಜ್ಯ ಸರ್ಕಾರ ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಸಚಿವರಿಗೆ ಒಂದು ತಿಂಗಳು ವರ್ಗಾವಣೆ ಅಧಿಕಾರ ನೀಡಲಾಗಿದೆ.
ಗ್ರೂಪ್ ಬಿ, ಸಿ ಮತ್ತು ಡಿ ನೌಕರರ ವರ್ಗಾವಣೆಗೆ ಸಚಿವರಿಗೆ ಒಂದು ತಿಂಗಳು ಅಧಿಕಾರ ನೀಡಲಾಗಿದೆ. ಜುಲೈ 22 ರಂದೇ ಸಾರ್ವತ್ರಿಕ ವರ್ಗಾವಣೆ ಮುಕ್ತಾಯಗೊಂಡಿದ್ದು, ಸಿಎಂ ಅನುಮೋದನೆಗೆ ವರ್ಗಾವಣೆ ಕೋರಿ ಅರ್ಜಿಗಳು ಬರುತ್ತಿವೆ. ಇದರಿಂದಾಗಿ ಇಲಾಖೆ ಕೆಲಸಕ್ಕೆ ಹಿನ್ನಡೆಯಾಗುತ್ತಿದೆ. ಈ ಕಾರಣದಿಂದ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಕನಿಷ್ಠ ಸೇವಾವಧಿಯನ್ನು ಪೂರೈಸಿದ ನೌಕರರನ್ನು ಲಭ್ಯವಿರುವ ಖಾಲಿ ಹುದ್ದೆಗಳಿಗೆ ವರ್ಗಾವಣೆಗೆ ಅನುಮೋದಿಸಲು ಸಚಿವರು ಅಧಿಕಾರ ಹೊಂದಿರುತ್ತಾರೆ.
ನೌಕರರನ್ನು ವರ್ಗಾವಣೆ ಮಾಡಿದಾಗ ತೆರವಾಗಲಿರುವ ಹುದ್ದೆಗೆ ಮತ್ತೊಂದು ವರ್ಗಾವಣೆಯ ಮೂಲಕ ಭರ್ತಿ ಮಾಡುವಂತಿಲ್ಲ. ಮುಂದಿನ ಸಾರ್ವತ್ರಿಕ ವರ್ಗಾವಣೆವರೆಗೂ ಯಾವುದೇ ಅವಧಿಪೂರ್ವ ವರ್ಗಾವಣೆಗಳನ್ನು ಮಾಡುವಂತಿಲ್ಲ. ಮತ್ತು ಅವಧಿ ಪೂರ್ವ ವರ್ಗಾವಣೆಯ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುವಂತಿಲ್ಲ ಎಂದು ಹೇಳಲಾಗಿದೆ.