ಬೆಂಗಳೂರು : ಈ ಬಾರಿಯೂ ಕೂಡ ಶಾಂತಿ ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬ ಆಚರಿಸಬೇಕು. ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಕೆಲವು ಸೂಚನೆಗಳನ್ನ ಕಡ್ಡಾಯವಾಗಿ ಪಾಲಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಹೇಳಿದರು.
ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಕೆಲವು ನಿಯಮಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ.ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಯಾವುದೇ ಗಲಾಟೆ, ಅನಾಹುತ ನಡೆಯದಂತೆ ನೋಡಿಕೊಳ್ಳಬೇಕು. ನಿಗದಿತ ಸ್ಥಳದಲ್ಲೇ ಗಣೇಶ ವಿಗ್ರಹಗಳನ್ನು ವಿಸರ್ಜಿಸಬೇಕು ಎಂದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ ಪಾಲಿಕೆಯ 63 ವಿಭಾಗ ಕಚೇರಿಗಳಲ್ಲಿ ತೆರೆಯಲಿರುವ ಏಕಗವಾಕ್ಷು ಕೇಂದ್ರಗಳಲ್ಲಿ ಸಂಘಟಕರು ಅನುಮತಿ ಪತ್ರ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಿದ 48 ಗಂಟೆಯೊಳಗೆ ಅನುಮತಿ ಸಿಗಲಿದೆ ಎಂದರು. ಗಣೇಶ ವಿಸರ್ಜನೆಗಾಗಿ ಕೆರೆಗಳ ಬಳಿ ಕೌಂಟರ್ ಗಳ ವ್ಯವಸ್ಥೆ ಮಾಡಿ ಅದಕ್ಕಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿರುತ್ತದೆ. ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದ್ದು, ಯಾರೂ ಕೂಡಾ ಪಿಒಪಿ ಗಣೇಶ ಮೂರ್ತಿಗಳನ್ನು ಖರೀದಿಸಬಾರದು ಎಂದರು.
ಪ್ರತಿ ವರ್ಷದಂತೆ ಈ ಬಾರಿ ಕೂಡ ಗಣೇಶ ವಿಸರ್ಜನೆಗೆ ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಹಾಗೂ ಇತರೆ ಪ್ರಮುಖ ಕೆರೆ/ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ಸ್ಥಳ/ಜಂಕ್ಷನ್ ಮತ್ತು ಅವಶ್ಯಕತೆ ಇರುವ ಕಡೆ ವಾರ್ಡ್ ವಾರು ತಾತ್ಕಾಲಿಕವಾಗಿ ಸಂಚಾರಿ ವಿಸರ್ಜನಾ ಘಟಕ(ಮೊಬೈಲ್ ಟ್ಯಾಂಕ್)ಗಳನ್ನು ಪ್ರತಿ ವರ್ಷದಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು
ಯಾವುದೇ ಅಹಿತಕರ ಘಟನೆ ನಡೆಯದಂತೆ ದುಷ್ಕರ್ಮಿಗಳ ಮೇಲೆ ಪೊಲೀಸ್ ಅಧಿಕಾರಿಗಳು ನಿಗಾವಿಡಲಿದ್ದಾರೆ. ಕಾನೂನು ವ್ಯವಸ್ಥೆಯಲ್ಲಿ ಯಾವುದೇ ರೀತಿಯ ದಕ್ಕೆಯಾಗದಂತೆ ಸಂಭ್ರಮದಿಂದ, ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸೋಣ ಎಂದು ತಿಳಿಸಿದರು.
ಸಭೆಯಲ್ಲಿ ವ್ಯಕ್ತವಾದ ಪ್ರಮುಖ ಸಲಹೆಗಳು
• ಪಿಒಪಿ ಗಣೇಶ ಮೂರ್ತಿಗಳನ್ನು ಕಡ್ಡಾಯವಾಗಿ ನಿಷೇಧಿಸಲು ಅಗತ್ಯ ಕ್ರಮ ಕೈಗೊಳ್ಳಿ,
ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ಬೆಸ್ಕಾಂ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಂಡು ಯಾವುದೇ ಅವಘಡ ನಡೆಯದಂತೆ ನೋಡಿಕೊಳ್ಳಬೇಕು.
.ಏಕಗವಾಕ್ಷಿ ಪದ್ದತಿಯಲ್ಲಿ ಅನುಮತಿ ಪತ್ರವನ್ನು ನೀಡಬೇಕು.
• ಹಲಸೂರು ಕೆರೆಯ ಕಲ್ಯಾಣಿಯನ್ನು ಇನ್ನೂ ಸ್ವಚ್ಛಗೊಳಿಸಿಲ್ಲ, ಕೂಡಲೆ ಸ್ವಚ್ಛಗೊಳಿಸಲು ಸೂಚನೆ ಕೊಡಿ.
• ಫ್ಲೆಕ್ಸ್, ಬ್ಯಾನರ್ ಅಳವಡಿಸಲು ಅನುಮತಿ ನೀಡಲು ಮನವಿ.
• ಸ್ಯಾಂಕಿ ಟ್ಯಾಂಕಿ ಕಲ್ಯಾಣಿ ಬಳಿ ವಿದ್ಯುತ್ ದೀಪ ಅಳವಡಿಸಿ.
ಯಾವುದೇ ಜಾತಿ ಭೇದ ಭಾವವಿಲ್ಲದೆ ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬವನ್ನು ಆಚರಿಸುತ್ತೇವೆ.
• ಹಿಂದು-ಕ್ರೈಸ್ತ-ಮುಸ್ಲಿಂ ಸೇರಿ ಒಂದಾಗಿ ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸುತ್ತೇವೆ.
• ಜೆಸಿ ನಗರದ ಬಳಿ ಗಣೇಶ ವಿಸರ್ಜನೆಯ ಮೆರವಣಿಗೆಯ ವೇಳೆ ಸಂಚಾರ ದಟ್ಟಣೆಯನ್ನು ನಿವಾರಣೆ ಮಾಡಿ.