
ಬೆಳಗಾವಿ: ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕು ಹೆಚ್ಚಳ ಭೀತಿ ಹಿನ್ನೆಲೆಯಲ್ಲಿ ಇಂದು ಸುವರ್ಣ ಸೌಧದಲ್ಲಿ ವಿಪತ್ತು ನಿರ್ವಹಣಾ ಸಮಿತಿಯ ಸಭೆ ನಡೆಯಲಿದೆ.
ಮುಂಜಾಗ್ರತೆ ಕ್ರಮ ಕೈಗೊಳ್ಳುವ ಬಗ್ಗೆ ಇಂದು ಸಭೆ ಆಯೋಜಿಸಲಾಗಿದೆ. ಹೊಸ ವರ್ಷದ ಸಂಭ್ರಮದ ವೇಳೆ ಯಾವ ರೀತಿ ನಿಗಾವಹಿಸಬೇಕು ಎಂಬ ಬಗ್ಗೆ ಹಾಗೂ ಮುಂಜಾಗ್ರತೆ ಕ್ರಮಗಳು ಕುರಿತು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುವುದು.
ಯಾವ ರೀತಿಯಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಬೇಕು. ಯಾವ ರೀತಿ ಜನರನ್ನು ಜಾಗೃತಗೊಳಿಸಬೇಕು ಎಂಬ ಬಗ್ಗೆ ತಜ್ಞರು, ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಲಾಗುವುದು. ನಂತರ ಮಾರ್ಗಸೂಚಿ ಬಿಡುಗಡೆ ಬಗ್ಗೆ ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಸಚಿವರಾದ ಆರ್. ಅಶೋಕ್, ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಬೆಂಗಳೂರು ಮತ್ತು ರಾಜ್ಯಕ್ಕೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.