ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ದೀಪಾವಳಿ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಲೈಸೆನ್ಸ್ ಇರುವವರಿಗೆ ಮಾತ್ರ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ಇರುತ್ತದೆ. ನವೆಂಬರ್ 11 ರಿಂದ 16 ರವರೆಗೆ ಮಾತ್ರ ಪಟಾಕಿ ಮಾರಾಟ ಮಾಡಬಹುದಾಗಿದ್ದು, ಸಂಬಂಧಪಟ್ಟ ಇಲಾಖೆ ಮತ್ತು ಪ್ರಾಧಿಕಾರದ ಅನುಮತಿ ಪಡೆಯಬೇಕು. ಸಾರ್ವಜನಿಕ ಸ್ಥಳಗಳಿಂದ ದೂರದ ಮೈದಾನದಲ್ಲಿ ಪಟಾಕಿ ಮಾರಾಟ ಅವಕಾಶವಿದ್ದು, ಆರು ಮೀಟರ್ ಅಂತರದಲ್ಲಿ ಮಳಿಗೆಗಳಿರಬೇಕು. ಲೈಸೆನ್ಸ್ ಪಡೆದವರು ಮಳಿಗೆಯಲ್ಲಿ ಕಡ್ಡಾಯವಾಗಿ ಇರಬೇಕು. ಮಾರಾಟದ ಲೈಸೆನ್ಸ್ ಅನ್ನು ಮಳಿಗೆಯ ಎದುರು ಅಳವಡಿಸಬೇಕು ಎಂದು ಹೇಳಲಾಗಿದೆ.
ಹಸಿರು ಪಟಾಕಿ ಮಳಿಗೆ ಬಳಿ ಸ್ಯಾನಿಟೇಷನ್ ಕಡ್ಡಾಯವಾಗಿದೆ. ಮಾರಾಟಗಾರರು, ಗ್ರಾಹಕರಿಗೆ ಮಾಸ್ಕ್ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ನಿಗದಿತ ಸ್ಥಳದಲ್ಲಿ ನಿಗದಿಪಡಿಸಿದ ದಿನಾಂಕ ಮತ್ತು ಸ್ಥಳದಲ್ಲಿ ಬಯಲು ಪ್ರದೇಶಗಳಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ಇದ್ದು, ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.