ಬೆಂಗಳೂರು: ಅನ್ನಭಾಗ್ಯದ ಪಡಿತರ ಅಕ್ಕಿಯಲ್ಲಿ ಸ್ವಲ್ಪ ಪ್ರಮಾಣದ ಅಕ್ಕಿ ನೀರಿನಲ್ಲಿ ಮುಳುಗದೆ ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಅದು ಪ್ಲಾಸ್ಟಿಕ್ ಅಕ್ಕಿ ಎಂದು ಜನ ಗೊಂದಲಕ್ಕೆ ಈಡಾಗಿರುವುದು ವರದಿಯಾಗಿದೆ. ಆದರೆ ಇದು ಆತಂಕ ಪಡುವ ಸಂಗತಿಯಲ್ಲ.
ನಿಮ್ಮ ಮನೆಗೆ ತಂದ ಅನ್ನಭಾಗ್ಯದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯಂತಹ ಕಾಳುಗಳು ಇದ್ದಲ್ಲಿ ಆತಂಕ ಪಡದಿರಿ ಮತ್ತು ಅದನ್ನು ಎಸೆಯದಿರಿ. ಏಕೆಂದರೆ ಅದು ಪ್ಲಾಸ್ಟಿಕ್ ಅಕ್ಕಿಯಲ್ಲ, ನಿಮ್ಮ ಆರೋಗ್ಯವನ್ನು ಉತ್ತಮವಾಗಿಸುವ ಪೌಷ್ಠಿಕಾಂಶವುಳ್ಳ ಸಾರವರ್ಧಿತ ಅಕ್ಕಿ.
ಕೇಂದ್ರ ಸರ್ಕಾರದ ಸಚಿವಾಲಯದ ಮಾರ್ಗಸೂಚಿಯಂತೆ ಪ್ರತಿ 1 ಕೆ.ಜಿ. ಅಕ್ಕಿಗೆ 10 ಗ್ರಾಂ. ನಷ್ಟು ಸಾರವರ್ಧಿತ ಅಕ್ಕಿಯನ್ನು ಬೆರೆಸಲಾಗುತ್ತದೆ. ಇದು ವ್ಯಕ್ತಿಯ ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವಗಳು, ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣಾಂಶ, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ ಯನ್ನು ಒದಗಿಸುತ್ತದೆ.
ಈ ಸಾರವರ್ಧಿತ ಅಕ್ಕಿಯು ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ರಕ್ತಹೀನತೆ, ಅಪೌಷ್ಟಿಕತೆಯನ್ನು ಹೋಗಲಾಡಿಸುತ್ತದೆ. ಪ್ರಯೋಗಾಲಯದಿಂದ ಪರೀಕ್ಷೆಗೆ ಒಳಪಟ್ಟ ಸಾರವರ್ಧಿತ ಅಕ್ಕಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಬಳಕೆಗೆ ಯೋಗ್ಯವಾದ ಪೌಷ್ಠಿಕಾಂಶಭರಿತವಾದ ಅಕ್ಕಿ ಎಂದು ಪರಿಗಣಿಸಲಾಗಿರುತ್ತದೆ.