ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ಶೀಘ್ರವೇ ವೇತನ ಬಿಡುಗಡೆ ಮಾಡುವಂತೆ ಶಾಸಕ ಎಸ್. ಸುರೇಶ್ ಕುಮಾರ್ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ರಾಜ್ಯದ 436 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಕನಿಷ್ಠ ಗೌರವಧನ ನೀಡಲಾಗುತ್ತಿದೆ. ಕಡಿಮೆ ವೇತನ ಪಡೆಯುತ್ತಿದ್ದರೂ ಅತಿಥಿ ಉಪನ್ಯಾಸಕರಿಗೆ ಕಳೆದ ಎರಡೂವರೆ ತಿಂಗಳಿನಿಂದ ವೇತನ ನೀಡಿಲ್ಲ ಎಂದು ತಿಳಿಸಿದ್ದಾರೆ.
ಮಕ್ಕಳ ಶಾಲಾ ಶುಲ್ಕ, ನಿತ್ಯದ ಖರ್ಚು, ಮನೆ ಬಾಡಿಗೆ, ಆಸ್ಪತ್ರೆ ಖರ್ಚು ಇವುಗಳನ್ನೆಲ್ಲ ಒಂದು ಕುಟುಂಬ ಭರಿಸಬೇಕಿದೆ. ಅತಿಥಿ ಉಪನ್ಯಾಸಕರಿಗೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರಿಗೆ ಕೂಡಲೇ ವೇತನ ದೊರಕಿಸಿ ಕೊಡಲು ಕ್ರಮ ಕೈಗೊಳ್ಳಬೇಕೆಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.