ಬೆಂಗಳೂರು: ಅತಿಥಿ ಉಪನ್ಯಾಸಕರ ಬೇಡಿಕೆ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಕೊಠಡಿಯಲ್ಲಿ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಡಿಸಿಎಂಗೆ ಮನವಿ ಮಾಡಿದ್ದು ಈ ವೇಳೆ ಭರವಸೆ ನೀಡಿದ್ದಾರೆ.
ಕನಿಷ್ಠ 25 ಸಾವಿರ ರೂಪಾಯಿ ವೇತನ, ಸೇವಾ ಭದ್ರತೆ ಒದಗಿಸಬೇಕೆಂಬ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಭಾಪತಿ, ಶಿಕ್ಷಕರ ಕ್ಷೇತ್ರಗಳನ್ನು ಪ್ರತಿನಿಧಿಸುವ ವಿಧಾನಪರಿಷತ್ ಸದಸ್ಯರು, ಅತಿಥಿ ಉಪನ್ಯಾಸಕರಿಗೆ ಮಾನವೀಯ ನೆಲೆಯಲ್ಲಿ ಸೇವಾ ಭದ್ರತೆ ನೀಡಲು ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ.
10 ವರ್ಷ ಸೇವೆ ಪೂರ್ಣಗೊಳಿಸಿದ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸುವುದು, ಮಾಸಿಕ 25 ಸಾವಿರ ರೂಪಾಯಿ ಗೌರವಧನ, ಪ್ರತಿ ವರ್ಷ ಮರು ನೇಮಕ ಮಾಡಿಕೊಳ್ಳುವ ಬದಲು ಕಾಯಂ ಆಗುವವರೆಗೂ ನೇಮಕಾತಿ ಮುಂದುವರೆಸುವ ಬಗ್ಗೆ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್. ಎಲ್. ಬೋಜೇಗೌಡ, ಅರುಣ ಶಹಾಪುರ್, ಎಸ್.ವಿ. ಸಂಕನೂರು ಮೊದಲಾದವರು ಇದ್ದರು.