ಬೆಂಗಳೂರು: ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯ ಸರ್ಕಾರದಿಂದ ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ವೇತನ ಹೆಚ್ಚಳ ಘೋಷಣೆ ಮಾಡಲಾಗಿದೆ.
ಉನ್ನತ ಶಿಕ್ಷಣ ಇಲಾಖೆ ವೇತನ ಹೆಚ್ಚಳದ ಕುರಿತಾಗಿ ಆದೇಶ ಹೊರಡಿಸಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮಾಡಲಾಗಿದೆ. 5 ವರ್ಷಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿದ ಯುಜಿಸಿ ವಿದ್ಯಾರ್ಹತೆ ಹೊಂದಿದ ಅತಿಥಿ ಉಪನ್ಯಾಸಕರ ವೇತನ 32 ಸಾವಿರ ರೂಪಾಯಿಗೆ ಹೆಚ್ಚಳವಾಗಿದೆ.
5 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರಿಗೆ 30 ಸಾವಿರ ವೇತನ ನಿಗದಿ ಪಡಿಸಲಾಗಿದೆ. ಅದೇ ರೀತಿ 5 ವರ್ಷಕ್ಕಿಂತ ಹೆಚ್ಚಿನ ಅವಧಿ ಸೇವೆ ಸಲ್ಲಿಸಿದ್ದರೂ ಕೂಡ ಯುಜಿಸಿ ನಿಗದಿಪಡಿಸಿದ ಅರ್ಹತೆಯಿಲ್ಲದ ಅತಿಥಿ ಉಪನ್ಯಾಸಕರಿಗೆ 28 ಸಾವಿರ ರೂಪಾಯಿ ವೇತನ ನೀಡಲಾಗುವುದು.
ಇದರೊಂದಿಗೆ ಅತಿಥಿ ಉಪನ್ಯಾಸಕರ ಕಾರ್ಯಭಾರದ ಅವಧಿಯನ್ನು 8 -10 ಗಂಟೆಯಿಂದ 15 ಗಂಟೆಗೆ ಹೆಚ್ಚಿಸಲಾಗಿದೆ. ಅತಿಥಿ ಉಪನ್ಯಾಸಕರನ್ನು ಸೆಮಿಸ್ಟರ್ ಅವಧಿಗೆ ಬದಲು ಶೈಕ್ಷಣಿಕ ವರ್ಷಕ್ಕೆ ನಿಗದಿಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.