ಹಾಸನ: ದಯಾಮರಣ ಕೋರಿ ಹಾಸನ ಜಿಲ್ಲೆಯ 300 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಪತ್ರ ಬರೆದಿದ್ದಾರೆ. ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು ಅಂಚೆ ಕಚೇರಿ ಮೂಲಕ ಪೋಸ್ಟ್ ಮಾಡಲಾಗಿದೆ.
ಅಂಚೆ ಕಚೇರಿ ಮೂಲಕ ಪತ್ರ ಪೋಸ್ಟ್ ಮಾಡಿರುವ ಅತಿಥಿ ಉಪನ್ಯಾಸಕರು, ಸರ್ಕಾರದ ಇಬ್ಬಗೆ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳಿಂದ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು, ಸರ್ಕಾರದ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸೋಮವಾರದಿಂದ ಹೋರಾಟ ತೀವ್ರಗೊಳಿಸಲು ಮುಂದಾಗಿದ್ದಾರೆ.
ಸರ್ಕಾರ ಅತಿಥಿ ಉಪನ್ಯಾಸರ ಗೌರವಧನ ಹೆಚ್ಚಳ ಮಾಡಿದೆ. ಆದರೆ, 8 -10 ಗಂಟೆ ಕಾರ್ಯಭಾರವನ್ನು 15 ಗಂಟೆಗೆ ಹೆಚ್ಚಿಸಿದೆ. ಇದರಿಂದಾಗಿ ಅರ್ಧದಷ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಹೊಸದಾಗಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸರ್ಕಾರ ಮುಂದಾಗಿದ್ದು, ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಬಿಟ್ಟು ಖಾಲಿ ಹುದ್ದೆಗಳಿಗೆ ಮಾತ್ರ ನೇಮಕ ಮಾಡಬೇಕು, ಸೇವಾ ಭದ್ರತೆ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅತಿಥಿ ಉಪನ್ಯಾಸಕರು ಹೋರಾಟ ಕೈಗೊಂಡಿದ್ದಾರೆ.