ದರೋಡೆಕೋರರನ್ನು ಬಂಧಿಸಬೇಕಾದ ಸಮಯದಲ್ಲಿ ಅವರಿಂದ ಬಂದೂಕುಗಳು ಮತ್ತು ಹಿಂಸಾಚಾರದ ಬಳಕೆ ಸಾಧ್ಯತೆಯಿರುವುದರಿಂದ ಪೊಲೀಸರು ಬಹಳ ಜಾಗರೂಕರಾಗಿರಬೇಕಾಗುತ್ತದೆ. ಬ್ರೆಜಿಲ್‌ನಲ್ಲಿ ಇತ್ತೀಚಿನ ಡ್ರಗ್ ದಾಳಿಯು ವಿಶಿಷ್ಟ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ಸೃಷ್ಟಿಸಿದೆ.
ಡ್ರಗ್ಸ್ ದಂಧೆಗೆ ಪೊಲೀಸರು ದಾಳಿ ಮಾಡಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಬ್ರೆಜಿಲಿಯನ್ ಪೊಲೀಸರು ಟನ್‌ಗಟ್ಟಲೆ ಗಾಂಜಾ ತುಂಬಿದ ಮನೆಯೊಂದಕ್ಕೆ ರೇಡ್ ಮಾಡಿದ್ದಾರೆ. ಈ ವೇಳೆ ಡ್ರಗ್ ಗ್ಯಾಂಗ್‌ನಲ್ಲಿರುವ ಎಲ್ಲಾ ಅಪರಾಧಿಗಳು ನೆಲದ ಮೇಲೆ ಮಲಗಿದ್ದಾರೆ. ಬೆನ್ನ ಹಿಂದೆ ಕೈಗಳನ್ನು ಕಟ್ಟಿಕೊಂಡು ಎಲ್ಲಾ ಸದಸ್ಯರು ಪೊಲೀಸರಿಗೆ ಶರಣಾಗಿದ್ದಾರೆ.
ಆದರೆ, ಒಬ್ಬ ಸದಸ್ಯ ಮಾತ್ರ ಶರಣಾಗಿದ್ದು ಮಾತ್ರ ಪೊಲೀಸರೂ ಸೇರಿದಂತೆ ಎಲ್ಲರಲ್ಲೂ ನಗು ತರಿಸಿದೆ. ಆ ಸದಸ್ಯ ಯಾರೂ ಅಂತಾ ಕೇಳಿದ್ರೆ ಅಚ್ಚರಿ ಪಡ್ತೀರಾ. ಗ್ಯಾಂಗ್‌ನ ರೊಟ್‌ವೀಲರ್ (ಶ್ವಾನ) ತನ್ನ ಮಾಲೀಕರ ಜೊತೆ ನಿಂತಿದೆ. ಯಾವುದೇ ಗಲಾಟೆ ಮಾಡದೆ ಸದ್ದಿಲ್ಲದೆ ಗ್ಯಾಂಗ್ ಪಕ್ಕದಲ್ಲಿ ಕಾವಲು ನಾಯಿ ತಾನೂ ಮಲಗಿದೆ.
ವರದಿಯ ಪ್ರಕಾರ, ಅಧಿಕಾರಿಗಳು ದಾಳಿ ಮಾಡಿದ ಆಸ್ತಿಯಿಂದ 1.1 ಟನ್ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಗ್ಯಾಂಗ್ ಸದಸ್ಯರನ್ನು ಹತ್ತಿರದ ಅಮೆರಿಕಾನಾದ ನಾರ್ಕೋಟಿಕ್ಸ್ ಪೋಲಿಸ್ ನ ಪ್ರಧಾನ ಕಛೇರಿಗೆ ಕರೆದೊಯ್ಯಲಾಗಿದೆ.