ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಾನು ನೀಡಿದ್ದ ಭರವಸೆಯಂತೆ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಈಗ ಒಂದೊಂದೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಸರ್ಕಾರದ ಈ ಯೋಜನೆಗಳಿಂದಾಗಿ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಸಿಗುತ್ತಿಲ್ಲ ಎಂಬ ಕೂಗಿನ ಮಧ್ಯೆ ಸ್ವತಃ ಕಾಂಗ್ರೆಸ್ ಶಾಸಕರೊಬ್ಬರು ಬಹಿರಂಗವಾಗಿಯೇ ಈ ಮಾತುಗಳನ್ನಾಡಿದ್ದಾರೆ.
ಸೋಮವಾರದಂದು ತಿಪಟೂರು ನಗರದ ಗಾಂಧಿ ಭವನ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಾಸಕ ಕೆ. ಷಡಕ್ಷರಿ, ಐದು ಗ್ಯಾರಂಟಿಗಳ ಜಾರಿಯಿಂದ ಸರ್ಕಾರ ಬೊಕ್ಕಸದಲ್ಲಿ ಹಣ ಇಲ್ಲ. ಈ ಗ್ಯಾರಂಟಿಗಳು ನಮ್ಮನ್ನು ಮಲಗಿಸಿ ಬಿಟ್ಟಿವೆ ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ಅವರು ಹೇಳಿರುವ ಮಾತಿನ ವಿಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ತಿಪಟೂರು ಮತ್ತು ಮಧುಗಿರಿ ಜಿಲ್ಲೆ ಮಾಡಬೇಕು ಎಂಬ ಬೇಡಿಕೆ ಇದ್ದು, ಈ ಕುರಿತು ನಾವುಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದೆವು. ಆಗ ಅವರು ಹೊಸ ಜಿಲ್ಲೆಗಳಿಗೆ ಕುರ್ಚಿ, ಬೆಂಚುಗಳಿಗೆ ಕೊಡಲೇ ಹಣ ಇಲ್ಲ ಎಂದು ಹೇಳಿದರು ಎಂದಿರುವ ಷಡಕ್ಷರಿ, ಹಣ ಇಲ್ಲದ ಕಾರಣ ಮುಂದಿನ ಬಜೆಟ್ ವರೆಗೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲದಂತಾಗಿದೆ ಎಂದಿದ್ದಾರೆ.