ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಜೂನ್ 13ರಂದು ಚುನಾವಣೆ ನಡೆಯಲಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂದೆ ಸಿದ್ದರಾಮಯ್ಯನವರಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದ ಯತೀಂದ್ರ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ.
ನಾಮಪತ್ರ ಸಲ್ಲಿಸಲು ಇಂದು ಅಂತಿಮ ದಿನವಾಗಿದ್ದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಸಂಖ್ಯಾಬಲದ ಆಧಾರದ ಮೇಲೆ ತಾವು ಗೆಲ್ಲಬಹುದಾದ ಸ್ಥಾನಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಿಸಿರುವ ಕಾರಣ ಎಲ್ಲರೂ ಬಹುತೇಕ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ತಮ್ಮ ಪಕ್ಷದ ಅಭ್ಯರ್ಥಿಗಳ ಜೊತೆ ನಾಮಪತ್ರ ಸಲ್ಲಿಕೆಗೆ ಬಂದ ವೇಳೆ ಸ್ವಾರಸ್ಯಕರ ಘಟನೆ ನಡೆದಿದೆ. ಸಿದ್ದರಾಮಯ್ಯನವರು ಬರುತ್ತಿರುವಾಗ ಜೆಡಿಎಸ್ ಶಾಸಕರು ಎದುರಾಗಿದ್ದು, ಕೆಲವರು ಸಿದ್ದರಾಮಯ್ಯನವರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ.
ತಮಗೆ ಎದುರಾದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಅವರ ಭುಜ ತಟ್ಟಿ ಸಿದ್ದರಾಮಯ್ಯನವರು ಮಾತನಾಡಿಸಿದ್ದು, ಈ ಸಂದರ್ಭದಲ್ಲಿ ಏನು ಮಗನನ್ನೇ ಅಭ್ಯರ್ಥಿಯನ್ನಾಗಿ ಮಾಡಿದ್ದೀರಾ ಎಂದು ಜಿ ಟಿ ಡಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಈ ಕುರಿತು ಮೊದಲೇ ಒಪ್ಪಂದವಾಗಿತ್ತು ಎಂದು ಹೇಳಿದ್ದಾರೆ.