ದೇಶದ ವ್ಯಾಪಾರಿಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಿಟನ್ಸ್ ಸಲ್ಲಿಸುವುದು ಕಡ್ಡಾಯವಾಗಿದೆ. ಹಾಗಾಗಿ, ಕೇಂದ್ರೀಯ ಪರೋಕ್ಷ ತೆರಿಗೆ ಹಾಗೂ ಕಸ್ಟಮ್ಸ್ ಮಂಡಳಿ (ಸಿಬಿಐಸಿ)ಯು ಜಿಎಸ್‌ಟಿಆರ್ ಸಲ್ಲಿಕೆಯ ಕೊನೆ ದಿನಾಂಕದ ಮಾಹಿತಿಯನ್ನು ಸರಣಿ ಟ್ವೀಟ್‌ಗಳ ಮೂಲಕ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ತಿಳಿಸಿದೆ. ಆಯಾ ಕೆಟಗರಿಗಳ ಅನ್ವಯವು ದಿನಾಂಕದ ಕುರಿತು ಮಾಹಿತಿ ನೀಡಿದೆ.
ಕ್ಯೂಆರ್‌ಎಂಪಿ ಯೋಜನೆ ವ್ಯಾಪ್ತಿಗೆ ಬರದ ಜಿಎಸ್‌ಟಿ ತೆರಿಗೆದಾರರು ಮಾರ್ಚ್ 11ರೊಳಗೆ ಜಿಎಸ್‌ಟಿಆರ್-1 ಸಲ್ಲಿಸಬೇಕು ಎಂದು ಸಿಬಿಐಸಿ ಟ್ವೀಟ್ ಮಾಡಿದೆ. ಹಾಗೆಯೇ, ಜಿಎಸ್‌ಟಿ ವ್ಯಾಪ್ತಿಗೆ ಬರುವ ಇ-ಕಾಮರ್ಸ್ ಆಪರೇಟರ್‌ಗಳು ಫೆಬ್ರವರಿ ತಿಂಗಳ ಜಿಎಸ್‌ಟಿಆರ್-8 ಅನ್ನು ಮಾರ್ಚ್ 10ರೊಳಗೆ ಸಲ್ಲಿಸಬೇಕು ಎಂದು ಮಾಹಿತಿ ನೀಡಿದೆ.
ಜಿಎಸ್‌ಟಿ ಅಡಿಯಲ್ಲಿ ‘ಟ್ಯಾಕ್ಸ್ ಡಿಡಕ್ಟ್ ಎಟ್ ಸೋರ್ಸ್’ (ಟಿಡಿಎಸ್) ಪಾವತಿಸಬೇಕಾದವರು ಫೆಬ್ರವರಿ ತಿಂಗಳ ಜಿಎಸ್‌ಟಿಆರ್-7ಅನ್ನು ಸಹ ಮಾರ್ಚ್ 10ರೊಳಗೆ ಸಲ್ಲಿಸಬೇಕಾಗಿದೆ. ಇದರಂತೆ, ಕೇಂದ್ರೀಯ ಅಬಕಾರಿ ಕಾಯಿದೆ, 1944ರ ಅಡಿಯಲ್ಲಿ ನೋಂದಣಿ ಮಾಡಿಕೊಂಡ ಉತ್ಪಾದನೆ ಕ್ಷೇತ್ರದ ಉದ್ಯಮಿಗಳು ಫೆಬ್ರವರಿ ತಿಂಗಳ ಕೇಂದ್ರೀಯ ಅಬಕಾರಿ ರಿಟರ್ನ್ ಅನ್ನು ಮಾರ್ಚ್ 10ರೊಳಗಾಗಿ ಸಲ್ಲಿಸಬೇಕು ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಹಾಗೂ ಕಸ್ಟಮ್ಸ್ ಮಂಡಳಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆದಾರರ ಐಟಿ ರಿಟರ್ನ್ ಸಲ್ಲಿಕೆಯ ಗಡುವನ್ನು ಮಾರ್ಚ್ 15ರ ತನಕ ವಿಸ್ತರಣೆ ಮಾಡಿದೆ. ಜಿಎಸ್‌ಟಿಆರ್ ಹಾಗೂ ಐಟಿ ರಿಟನ್ಸ್ ಅನ್ನು ನಿಗದಿತ ದಿನಾಂಕದೊಳಗೆ ಸಲ್ಲಿಕೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ. ಹಾಗಾಗಿಯೇ ಸಿಬಿಐಸಿಯು ಸಾಲು ಸಾಲು ಟ್ವೀಟ್‌ಗಳ ಮೂಲಕ ಉದ್ಯಮಿಗಳು, ವ್ಯಾಪಾರಿಗಳಿಗೆ ತಿಳಿಸಿದೆ.