
ಬರೋಬ್ಬರಿ 1,000 ಕೋಟಿ ರೂಪಾಯಿಗಳ ಮೌಲ್ಯದ ಬೋಗಸ್ ಬಿಲ್‌ಗಳನ್ನು ನೀಡಿ 181 ಕೋಟಿ ರೂ.ನಷ್ಟು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚನೆ ಮಾಡಿದ ಆರೋಪದ ಮೇಲೆ ‘ಅಕೌಂಟೆಂಟ್’ ಒಬ್ಬನನ್ನು ಬಂಧಿಸಲಾಗಿದೆ ಎಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
12 ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವ, 27 ವರ್ಷದ ಈತ ಅಕೌಂಟೆಂಟ್ ಮತ್ತು ಜಿಎಸ್‌ಟಿ ಸಲಹೆಗಾರರಾಗಿ ಕೆಲಸ ಮಾಡಿದ್ದು, ಈತನನ್ನು ಮುಂಬೈ ವಲಯದ ಪಾಲ್ಘರ್ ಸಿಜಿಎಸ್‌ಟಿ ಕಮಿಷನರೇಟ್ ಅಧಿಕಾರಿಗಳು ಬಂಧಿಸಿದ್ದಾರೆ.
ಗುಡ್ ನ್ಯೂಸ್: 1.50 ಲಕ್ಷ ರೂ. ಹೆಚ್ಚುವರಿ ತೆರಿಗೆ ವಿನಾಯಿತಿ ಪಡೆಯಲು ಇಲ್ಲಿದೆ ಮಾಹಿತಿ
ದತ್ತಾಂಶ ಗಣಿಗಾರಿಕೆ (ಡೇಟಾ ಮೈನಿಂಗ್) ಮತ್ತು ದತ್ತಾಂಶ ವಿಶ್ಲೇಷಣೆಯಿಂದ (ಡೇಟಾ ಅನಾಲಿಸಿಸ್) ಪಡೆದ ನಿರ್ದಿಷ್ಟ ಮಾಹಿತಿಗಳ ಆಧಾರದ ಮೇಲೆ ಈ ವಿಚಾರವಾಗಿ ತನಿಖೆಗಳು ಪ್ರಾರಂಭವಾಗಿದ್ದು, M/s ನಿಥಿಲನ್ ಎಂಟರ್‌ಪ್ರೈಸಸ್ ಎಂಬ ಸಂಸ್ಥೆಯ ಸರಕುಗಳು ಅಥವಾ ಸೇವೆಗಳ ರಶೀದಿಗಳಲ್ಲಿ ನಕಲಿ ಇನ್‌ವಾಯ್ಸ್‌ಗಳನ್ನು ನೀಡುವ ಮೂಲಕ ನಕಲಿ ಇನ್‌ಪುಟ್ ತೆರಿಗೆ ಕ್ರೆಡಿಟ್ ಪಡೆಯುವಲ್ಲಿ ಮತ್ತು ರವಾನಿಸುವಲ್ಲಿ ತೊಡಗಿಸಿಕೊಂಡಿದೆ ಎಂದು ಅದು ಹೇಳಿದೆ.
ದುಡ್ಡು ಕೊಳ್ಳೆ ಹೊಡೆಯುವ ಉದ್ದೇಶದಿಂದ ತನ್ನ ಗ್ರಾಹಕರೊಬ್ಬರ ಗುರುತನ್ನು ಕದ್ದು, ಈ ಅಕೌಂಟೆಂಟ್ ಜಿಎಸ್‌ಟಿ ವಂಚನೆ ಎಸಗಿದ್ದು ತನಿಖೆಯಲ್ಲಿ ತಿಳಿದುಬಂದಿದೆ.
ತನ್ನ ವಂಚನೆ ಕೃತ್ಯಗಳ ನೇರಾ ನೇರ ಸಾಕ್ಷ್ಯಗಳನ್ನು ಎದುರಿಸಿದ ಅಕೌಂಟೆಂಟ್ 1,000 ಕೋಟಿ ರೂಪಾಯಿಗೂ ಮೀರಿದ ಬೋಗಸ್ ಬಿಲ್‌ಗಳನ್ನು ನೀಡಿ 181 ಕೋಟಿ ರೂಪಾಯಿಯ ನಕಲಿ ಇನ್‌ಪುಟ್ ತೆರಿಗೆ ಕ್ರೆಡಿಟ್ ಪಡೆದ ಅಪರಾಧ ಒಪ್ಪಿಕೊಂಡಿದ್ದಾನೆ. ಈತನನ್ನು ಮಂಗಳವಾರ ಬಂಧಿಸಲಾಯಿತು. ಸ್ಥಳೀಯ ನ್ಯಾಯಾಲಯ ಬಂಧಿತ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆರೋಪಿಯು ಅಮಾಯಕ ಮಂದಿಗೆ ಜಿಎಸ್‌ಟಿ ನೋಂದಣಿಯನ್ನು ಮಾಡಿಕೊಡುವ ಆಮಿಷವೊಡ್ಡುವ ಮತ್ತು ನಂತರ ಈ ನೋಂದಣಿಯನ್ನು ‘ಕದಿಯುವ’ ದೊಡ್ಡ ಜಾಲವೊಂದರ ಭಾಗವಾಗಿದ್ದಾನೆ ಎಂದು ಶಂಕಿಸಲಾಗಿದೆ. ಈ ಕದ್ದ ನೋಂದಣಿಗಳನ್ನು ನಕಲಿ ಐಟಿಸಿಯನ್ನು ಉತ್ಪಾದಿಸಲು ಮತ್ತು ರವಾನಿಸಲು ನಿಯೋಜಿಸಲಾಗುತ್ತಿತ್ತು.
ದಂಧೆಯ ಕಿಂಗ್‌ಪಿನ್ ಮತ್ತು ಈ ಜಾಲದ ಇತರ ಫಲಾನುಭವಿಗಳನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಹಾನಗರದಲ್ಲಿ ಇಂಥದ್ದೇ ಅನೇಕ ಪ್ರಕರಣಗಳನ್ನು ಜಿಎಸ್‌ಟಿ ಅಧಿಕಾರಿಗಳು ಭೇದಿಸಿದ್ದಾರೆ.
ಪಾಲ್ಘರ್ ಸಿಜಿಎಸ್‌ಟಿ ಕಮಿಷನರೇಟ್ ವ್ಯಾಪ್ತಿಯ ಒಂದರಲ್ಲೇ 460 ಕೋಟಿ ರೂಪಾಯಿಯಷ್ಟು ತೆರಿಗೆ ವಂಚನೆ ಪತ್ತೆ ಹಚ್ಚಿದ್ದು, ಇದರಲ್ಲಿ 12 ಕೋಟಿ ರೂಪಾಯಿ ವಸೂಲಿ ಮಾಡಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.