ಬೆಂಗಳೂರು: ಜಿಎಸ್ ಟಿ ಅಧಿಕಾರಿಗಳ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಓರ್ವ ಮಹಿಳಾ ಅಧಿಕಾರಿಯ ಮನೆಯಲ್ಲಿ 32 ಮೊಬೈಲ್ ಫೋನ್ ಗಳು ಪತ್ತೆಯಾಗಿವೆ.
ಬೆಂಗಳೂರು ಪೊಲೀಸರು ಎರಡು ದಿನಗಳ ಹಿಂದೆ ನಾಲ್ವರು ಜಿಎಸ್ ಟಿ ಅಧಿಕಾರಿಗಳನ್ನು ಬಂಧಿಸಿದ್ದರು. ಆಗಸ್ಟ್ 30ರಂದು ಉದ್ಯಮಿ ಕೇಶವ್ ಅವರ ಮನೆ ಮೇಲೆ ನಾವು ಜಿಎಸ್ ಟಿ, ಇಡಿ ಅಧಿಕಾರಿಗಳು ಎಂದು ನಾಲ್ವರು ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಉದ್ಯಮಿ ಕೇಶ್ ಸೇರಿದಂತೆ ಮನೆಯಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದು ಇಂದಿರಾನಗರ, ಜೀವನ್ ಭೀಮಾನಗರ ಸೇರಿದಂತೆ ವಿವಿಧೆಡೆ ರಾತ್ರಿಯಿಡಿ ಸುತ್ತಾಡಿಸಿದ್ದರು, ಬಳಿಕ ಮೂರು ಕೋಟಿ ಹಣ ನೀಡುವಂತೆ ಉದ್ಯಮಿ ಮೇಲೆ ಹಲ್ಲೆ ನಡೆಸಿದ್ದರು.
ಭಯಗೊಂಡ ಉದ್ಯಮಿ ಕೇಶವ್, ರೋಷನ್ ಜೈನ್ ಎಂಬುವವರಿಗೆ ಕರೆ ಮಾಡಿ 3 ಕೋಟಿ ಹಣ ತಂದುಕೊಡುವಂತೆ ಹೇಳಿದ್ದರು. ಮಾರನೆ ದಿನ ರೋಷನ್ ಜೈನ್ ಮೂರು ಕೋಟಿ ಬದಲು 1.50 ಕೋಟಿ ತಂದುಕೊಂಟ್ಟಿದ್ದರು. ಹಣ ಪಡೆದ ಅಧಿಕಾರಿಗಳು ಕೇಶವ್ ಕಡೆಯವರನ್ನು ಬಿಟ್ಟು ಕಳುಹಿಸಿದ್ದರು. ಜಿಎಸ್ ಟಿ ಅಧಿಕಾರಿಗಳು ಹಣ ಪಡೆದು ಎಸ್ಕೇಪ್ ಆಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ನಾಲ್ವರು ಅಧಿಕಾರಿಗಳನ್ನು ಬಂಧಿಸಿ ಅವರ ನಿವಾಸದಲ್ಲಿಯೂ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಹಿಳಾ ಅಧಿಕರಿ ಮನೆಯಲ್ಲಿ 32 ಮೊಬೈಲ್ ಗಳು, 50 ಚೆಕ್ ಬುಕ್, ಎರಡು ಲ್ಯಾಪ್ ಟಾಪ್ ಪತ್ತೆಯಾಗಿದೆ.