ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಜಿಎಸ್‌ಟಿ ಮಂಡಳಿ ಸಭೆ ಶನಿವಾರ ಜೈಸಲ್ಮೇರ್ ನಲ್ಲಿ ನಡೆಯಲಿದೆ.
ಆರೋಗ್ಯ ಮತ್ತು ಜೀವ ವಿಮೆ ಕಂತಿನ ಮೇಲೆ ವಿಧಿಸಲಾಗುತ್ತಿರುವ ಶೇಕಡ 18ರಷ್ಟು ಜಿಎಸ್‌ಟಿ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ. ಜಿಎಸ್‌ಟಿ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಚಿವರ ಸಮಿತಿಯು ಅವಧಿ ವಿಮೆ ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆ ಕಂತಿನ ಮೇಲಿನ ತೆರಿಗೆ ಹಿಂಪಡೆಯುವ ಬಗ್ಗೆ ಶಿಫಾರಸು ಮಾಡಿದೆ. ಹಿರಿಯ ನಾಗರಿಕರನ್ನು ಹೊರತುಪಡಿಸಿ ವೈಯಕ್ತಿಕ ವಿಮೆದಾರರ 5 ಲಕ್ಷ ರೂ. ಒಳಗಿನ ಆರೋಗ್ಯ ವಿಮಾ ಕಂತಿನ ಮೇಲೆ ತೆರಿಗೆ ವಿನಾಯಿತಿ ನೀಡಲು ವರದಿ ನೀಡಲಾಗಿದೆ. ಈ ಶಿಫಾರಸುಗಳಿಗೆ ಜಿಎಸ್‌ಟಿ ಮಂಡಳಿ ಸಭೆ ಅಂಕಿತ ಹಾಕುವ ಸಾಧ್ಯತೆ ಇದೆ.
ದುಬಾರಿ ಮೌಲ್ಯದ ಕೈಗಡಿಯಾರ, ಶೂ ಮತ್ತು ಉಡುಪುಗಳ ಮೇಲಿನ ಜಿಎಸ್‌ಟಿ ಹೆಚ್ಚಳಕ್ಕೆ ಶಿಫಾರಸು ಮಾಡಿದ್ದು, ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಆನ್ಲೈನ್ ಮೂಲಕ ಆಹಾರ ಪೂರೈಸುವ ಸ್ವಿಗ್ಗಿ ಮತ್ತು ಜೊಮ್ಯಾಟೋ ಆಹಾರ ವಿತರಣೆಯ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸುತ್ತಿದ್ದು, ಇದನ್ನು ಶೇಕಡ 5ಕ್ಕೆ ಕಡಿತಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.