ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಒಂದು ಕೋಟಿ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಜುಲೈ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಚಾಲನೆ ನೀಡಿದ್ದರು. ಜುಲೈ 20ರಂದು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, 1.28 ಕೋಟಿ ಫಲಾನುಭವಿಗಳಿದ್ದಾರೆ. ನೋಂದಣಿ ಪ್ರಕ್ರಿಯೆ ಆರಂಭವಾದ 15 ದಿನಗಳ ಅವಧಿಯಲ್ಲಿ ಒಂದು ಕೋಟಿಗೂ ಅಧಿಕ ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಕರ್ನಾಟಕ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಯಾವುದೇ ಶುಲ್ಕ ನೀಡದೆ ಮಹಿಳೆಯರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಆಗಸ್ಟ್ 24ರಂದು ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೃಹಿಣಿಯರ ಖಾತೆಗೆ 2000 ರೂ. ಜಮಾ ಮಾಡುವ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ ಎಂದು ಹೇಳಲಾಗಿದೆ.