ಧಾರವಾಡ: ಗೃಹಲಕ್ಷ್ಮಿ ಯೋಜನೆಯ ಗೊಂದಲ ಬಗೆಹರಿಸುತ್ತಿದ್ದು, ಈಗ ಎಲ್ಲವನ್ನು ಸರಳಗೊಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಈಗಾಗಲೇ 1.9 ಕೋಟಿ ಜನರಿಗೆ ಹಣ ತಲುಪಿಸಿದ್ದೇವೆ. ಇನ್ನು 5ರಿಂದ 6 ಲಕ್ಷ ಜನರದ್ದು ಕ್ಲಿಯರ್ ಆಗಬೇಕಿದೆ. ಗೃಹಲಕ್ಷ್ಮಿ ಯೋಜನೆಗೆ ಅನುದಾನದ ಕೊರತೆ ಇಲ್ಲ. ಆದರೆ, ತಾಂತ್ರಿಕ ತೊಂದರೆಯಿಂದ ವಿಳಂಬ ಆಗಿದೆ ಎಂದು ತಿಳಿಸಿದ್ದಾರೆ.
15 ಲಕ್ಷ ಜನ ಆಧಾರ್ ಲಿಂಕ್ ಇಲ್ಲದ ಬ್ಯಾಂಕ್ ಖಾತೆ ವಿವರ ನೀಡಿದ್ದರು. ಇವರಿಗೆ ಹಣ ನೀಡುವಲ್ಲಿ ವಿಳಂಬವಾಗಿದೆ. ಕೆಲವರ ಖಾತೆ ಚಾಲ್ತಿ ಇರಲಿಲ್ಲ. ಇದರಿಂದಲೂ ತಡವಾಗಿದೆ. ಈಗ ಎಲ್ಲಾ ಕ್ಲಿಯರ್ ಆಗುತ್ತಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಯಾವುದೇ ಯೋಜನೆಗೆ ಅನುದಾನದ ಕೊರತೆ ಇಲ್ಲ. ಮುಖ್ಯಮಂತ್ರಿಗಳು ಅನುದಾನ ತೆಗೆದಿಟ್ಟಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಕೂಡ ನಾವು ನಿಲ್ಲಿಸಿಲ್ಲ. ಆದರೆ ಹಿಂದಿನ ಸರ್ಕಾರ ಯದ್ವಾ ಟೆಂಡರ್ ಮಾಡಿತ್ತು. ಅವರೇ ಈಗ ಅಭಿವೃದ್ಧಿ ಬಗ್ಗೆ ಕೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.