ಬೆಂಗಳೂರು: ಎಲ್ಲಾ ದಾಖಲೆಗಳು ಸರಿ ಇದ್ದರೂ, ಯೋಜನೆಗೆ ಅರ್ಹರೆಂದು ದೃಢೀಕರಣ ಸಂದೇಶ ಬಂದಿದ್ದರೂ, ಇನ್ನು ಸುಮಾರು 9.44 ಲಕ್ಷ ಮಹಿಳೆಯರಿಗೆ ತಾಂತ್ರಿಕ ದೋಷದ ನೆಪದಿಂದ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಖಾತೆಗೆ ಜಮಾ ಆಗಿಲ್ಲ. ಇದರಿಂದಾಗಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾಖಲೆ ಸರಿ ಇಲ್ಲ, ತಾಂತ್ರಿಕ ದೋಷ ಎಂದೆಲ್ಲ ನೆಪ ಹೇಳಲಾಗುತ್ತಿದೆ ಎಂದು ಮಹಿಳೆಯರು ದೂರಿದ್ದಾರೆ. ಕುಟುಂಬದ ಯಜಮಾನರಿಗೆ ಮಾಸಿಕ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ 9,44,155 ಅರ್ಜಿದಾರರ ಖಾತೆಗೆ ಹಣ ಸಂದಾಯವಾಗಿಲ್ಲ. ಇವರಲ್ಲಿ 3082 ಅರ್ಜಿದಾರರು ಮೃತಪಟ್ಟಿದ್ದು, ಅವರನ್ನು ಅನರ್ಹಗೊಳಿಸಲಾಗಿದೆ.
1,59,356 ಮಹಿಳೆಯರ ಆಧಾರ್ ಮತ್ತು ಬ್ಯಾಂಕ್ ಖಾತೆ ಹೆಸರಿನಲ್ಲಿ ವ್ಯತ್ಯಾಸವಿದೆ. 5,96,68 ಫಲಾನುಭವಿಗಳ ಖಾತೆಗೆ ಆಧಾರ್ ಜೋಡಣೆಯಾಗಿಲ್ಲ. 1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸದಲ್ಲಿ ವ್ಯತ್ಯಾಸ ಇದೆ. ಹೀಗೆ ವಿವಿಧ ಕಾರಣಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಸಂದಾಯವಾಗಿಲ್ಲ ಎಂದು ಹೇಳಲಾಗಿದೆ.
ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. ಬಹುತೇಕರ ಖಾತೆಗೆ ಹಣ ಸಂದಾಯವಾಗಿದೆ. ಆದರೆ, ಅರ್ಜಿ ಸಲ್ಲಿಕೆ ಅನುಮೋದನೆಯಾಗಿ ಅರ್ಹರೆಂದು ದೃಢೀಕರಣ ಬಂದಿದ್ದರೂ 9.44 ಲಕ್ಷ ಮಂದಿಗೆ ಹಣ ಸಂದಾಯವಾಗಿಲ್ಲ. ಲೋಪ ದೋಷಗಳನ್ನು ಸರಿಪಡಿಸಿ ಖಾತೆಗೆ ಹಣ ಜಮಾ ಮಾಡುವ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ.