ಬೆಂಗಳೂರು: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡ 1.21 ಕೋಟಿ ಮಹಿಳಾ ಫಲಾನುಭವಿಗಳಲ್ಲಿ 1.12 ಕೋಟಿ ಫಲಾನುಭವಿಗಳಿಗೆ 2 ಸಾವಿರ ರೂ. ವರ್ಗಾವಣೆಯಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದು, 8.20 ಲಕ್ಷ ಮಹಿಳೆಯರ ಖಾತೆಗೆ ನಗದು ವರ್ಗಾವಣೆ ಬಾಕಿ ಇದೆ ಎಂದು ಹೇಳಿದ್ದಾರೆ.
ಪ್ರತಿ ತಿಂಗಳ 15ನೇ ತಾರೀಖಿನ ಬಳಿಕ ಫಲಾನುಭವಿಗಳ ಖಾತೆಗೆ ಹಣ ಪಾವತಿಸಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ನೋಂದಾಯಿಸಿಕೊಂಡ ಫಲಾನುಭವಿಗಳಿಗೆ ಕೆವೈಸಿ ಅಪ್ಡೇಟ್, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದಿರುವುದು ಸೇರಿ ಹಲವು ಕಾರಣಗಳಿಂದ ಖಾತೆಗೆ ಹಣ ಸಂದಾಯವಾಗಿಲ್ಲ. ಸಮಸ್ಯೆ ಪರಿಹರಿಸಿಕೊಂಡು ನಂತರ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಹಣ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.
ಪಡಿತರ ಚೀಟಿಯಲ್ಲಿ ಮನೆಯ ಯಜಮಾನ ಇರುವುದನ್ನು ಬದಲಿಸಿ ಮಹಿಳೆಯರನ್ನು ಯಜಮಾನಿಯಾಗಿ ತಿದ್ದುಪಡಿ ಮಾಡಿಕೊಂಡಿರುವ ಮಹಿಳೆಯರಿಗೂ ಸೌಲಭ್ಯ ಸಿಕ್ಕಿಲ್ಲ. ಅಂತಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಿದ ತಿಂಗಳಿನಿಂದಲೇ ಹಣ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.