ಬೆಂಗಳೂರು: ಪಡಿತರ ಚೀಟಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿದ್ದರೂ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಗೆ ಹೆಸರು ನೋಂದಾಯಿಸುವಾಗ ಕಾರ್ಡ್ ಗಳು ನಿಷ್ಕ್ರಿಯವಾಗಿವೆ ಎನ್ನುವ ಸಂದೇಶ ಬರತೊಡಗಿದ್ದು, ಇದರಿಂದಾಗಿ 17 ಲಕ್ಷಕ್ಕೂ ಅಧಿಕ ಕಾರ್ಡ್ ದಾರರು ಗೃಹಲಕ್ಷ್ಮಿ ಯೋಜನೆಯಿಂದ ಹೊರಗೆ ಉಳಿಯುವ ಪರಿಸ್ಥಿತಿ ಎದುರಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರೂಪಾಯಿ ಪಡೆಯಲು ಬಿಪಿಎಲ್, ಎಪಿಎಲ್ ಪಡಿತರ ಚೀಟಿ ಹೊಂದಿರಬೇಕಿದ್ದು, ಮಹಿಳಾ ಸದಸ್ಯರ ಹೆಸರಿನಲ್ಲಿ ಕಾರ್ಡ್ ಇರಬೇಕು. ಮಹಿಳೆಯರೇ ಕಾರ್ಡ್ ನ ಮುಖ್ಯಸ್ಥರಾಗಿದ್ದರೂ ಕೂಡ ಅಂತಹವರನ್ನು ತಾಂತ್ರಿಕ ಕಾರಣ ನೀಡಿ ಯೋಜನೆಯಿಂದ ಹೊರಗಿಡುವಂತಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ ಈ ಗೊಂದಲ ಪರಿಹರಿಸುತ್ತಿಲ್ಲ. ಪಡಿತರ ಚೀಟಿಗಳಿಗೆ ಮನೆಮಂದಿಯೆಲ್ಲ ಆಧಾರ್ ಜೋಡಣೆ ಮಾಡಿಸಿದ್ದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಹೋದಾಗ ಕಾರ್ಡ್ ಚಾಲ್ತಿಯಲ್ಲಿಲ್ಲ, ನಿಷ್ಕ್ರಿಯವಾಗಿದೆ ಎಂದು ತಿಳಿಸಲಾಗಿದೆ. ಆದರೆ, ಆಹಾರ ಇಲಾಖೆ ವೆಬ್ಸೈಟ್ ನಲ್ಲಿ ಪಡಿತರ ಚೀಟಿ ಚಾಲ್ತಿಯಲ್ಲಿದೆ ಎಂದು ತೋರಿಸಿದೆ.
ಗೃಹಲಕ್ಷ್ಮಿ ಯೋಜನೆಗೆ ಗ್ರಾಹಕರು ಬ್ಯಾಂಕ್ ನಲ್ಲಿ ಇ-ಕೆವೈಸಿ ಮಾಡಿಸಬೇಕು. ಪಡಿತರ ಚೀಟಿಯಲ್ಲಿ ಲೋಪ ದೋಷಗಳಿದ್ದಲ್ಲಿ ಆಹಾರ ಇಲಾಖೆಗೆ ಭೇಟಿ ನೀಡಬೇಕು. ನಿಖರವಾದ ಕಾರಣ ಮತ್ತು ಪರಿಹಾರ ತಿಳಿಸಲಾಗುವುದು. ಸಮಸ್ಯೆ ಪತ್ತೆ ಹಚ್ಚಲಾಗುವುದು. ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಣಿಯಾಗದವರಿಗೆ ಅಂತರ್ಜಾಲದಲ್ಲಿ ಬಂದಿರುವ ಸಂದೇಶದ ಬಗ್ಗೆ ಸ್ಕ್ರೀನ್ ಶಾಟ್ ತೆಗೆದು ಕಳುಹಿಸಲು ತಿಳಿಸಲಾಗಿದೆ. ಅಂತಹ ದೂರುಗಳನ್ನು ಐಟಿ ವಿಭಾಗಕ್ಕೆ ಕಳುಹಿಸಿ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಯಾವ ಸಮಸ್ಯೆ ಅಡ್ಡಿಯಾಗಿದೆ ಎಂಬುದನ್ನು ಪತ್ತೆ ಮಾಡಿ ಸಮಸ್ಯೆ ಪರಿಹರಿಸಲಾಗುವುದು. ಅಂತಹವರು ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗಿದೆ.