ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಮನೆಯ ಯಜಮಾನಿ ಮಹಿಳೆಯರಿಗೆ 2,000 ರೂ. ಸಹಾಯಧನ ನೀಡುವ ಗೃಹಲಕ್ಷ್ಮೀ ಯೋಜನೆಗೆ ಜುಲೈ 19 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಗಸ್ಟ್ ತಿಂಗಳಿಂದ ಮನೆ ಯಜಮಾನಿ ಖಾತೆಗೆ 2 ಸಾವಿರ ರೂ. ಹಾಕುತ್ತೇವೆ . ಅರ್ಜಿ ಸ್ವೀಕಾರ ಜುಲೈ 19 ರಿಂದ ಆರಂಭವಾಗಲಿದ್ದು, ಆಗಸ್ಟ್ 15ಕ್ಕೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಆಗಲಿದೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ಗಳಲ್ಲಿ ಯಜಮಾನಿ ಎಂದು ಗುರುತಿಸಿಕೊಂಡ ಮಹಿಳೆಯರಿಗೆ ಈ ಯೋಜನೆಯ ಲಾಭ ಸಿಗಲಿದೆ’ ಎಂದರು
ಗೃಹಲಕ್ಷ್ಮೀ’ಯೋಜನೆಗೆ ನೋಂದಣಿಗೆ ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆಯ ಪಾಸ್ ಬುಕ್ ಅಗತ್ಯ. ಒಂದು ವೇಳೆ ಆಧಾರ್ ನಂಬರ್ ಜೋಡಣೆಯಾಗಿರುವ ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಬಯಸಿದಲ್ಲಿ ಆ ಖಾತೆಯ ಪಾಸ್ ಬುಕ್ ಅಗತ್ಯ. ಗ್ರಾಮ ವನ್, ಬಾಪೂಜಿ ಕೇಂದ್ರ, ಕರ್ನಾಟಕ ವನ್, ಬೆಂಗಳೂರು ವನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಾಗ ಮಂಜೂರಾತಿ ಪತ್ರ ನೀಡಲಾಗುತ್ತದೆ.
ಪ್ರಜಾಪ್ರತಿನಿಧಿ ಮೂಲಕ ನೊಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರ ಮನೆಗೆ ತಲುಪಿಸಲಾಗುವುದು. ಅರ್ಜಿದಾರರು ನೀಡಿದ ಮೊಬೈಲ್ ಸಂಖ್ಯೆಗೆ ಎಸ್ ಎಂಎಸ್ ಮೂಲಕ ಮಂಜೂರಾತಿ ಸಂದೇಶ ರವಾನೆ ಮಾಡಲಾಗುತ್ತದೆ. ಫಲಾನುಭವಿಯ ಆಧಾರ್ ಜೋಡಣೆಯಾಗಿರುವ ಖಾತೆಗೆ ಡಿಬಿಟಿ ಮೂಲಕ ಹಣ ಜಮೆ ಮಾಡುತ್ತೇವೆ. ಬೇರೆ ಖಾತೆಗೆ ಆರ್ ಟಿಜಿಎಸ್ ಮೂಲಕ ಹಣ ಜಮೆ ಮಾಡಲಾಗುತ್ತದೆ. ನೋಂದಣಿಗೆ ಯಾವುದೇ ಶುಲ್ಕ, ಯಾವುದೇ ಅಂತಿಮ ದಿನಾಂಕ ಮತ್ತು ಸಮಯ ನಿಗದಿಪಡಿಸಿಲ್ಲ ಎಂದು ಹೇಳಿದರು.