ಬೆಂಗಳೂರು : ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಮಹಿಳೆಯರಿಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ರೇಷನ್ ಕಾರ್ಡ್ ನಲ್ಲಿ ಯಜಮಾನಿ ಎಂದು ತಿದ್ದುಪಡಿ ಮಾಡಲು ಅಕ್ಟೋಬರ್ 21 ರವರೆಗೆ ಮತ್ತೆ ಅವಕಾಶ ನೀಡಿದ್ದು, ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿಯ ಸ್ಥಾನದ ತಿದ್ದುಪಡಿಗಳಿದ್ದಲ್ಲಿ, ಕೂಡಲೇ ಅರ್ಜಿ ಸಲ್ಲಿಸಿ ಹಾಗೂ ಯೋಜನೆಯ ಪ್ರಯೋಜನ ಪಡೆಯಬಹುದು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿಯಲ್ಲಿ ತಿದ್ದುಪಡಿ ಅಥವಾ ಸೇರ್ಪಡೆಗೆ ಅವಕಾಶ ನೀಡಿದೆ. ಗೃಹಲಕ್ಷ್ಮಿಯೋಜನೆಯ ಲಾಭ ಪಡೆಯಲು ಕುಟುಂಬದ ಯಜಮಾನಿಯ ಸ್ಥಾನ ಬದಲಾಯಿಸುವ ಅವಶ್ಯಕತೆ ಇದ್ದಲ್ಲಿ ಅರ್ಜಿ ಸಲ್ಲಿಸಬಹುದು.
ಈ ಜಿಲ್ಲೆಗಳಲ್ಲಿ ಮಾತ್ರ ಅವಕಾಶ
ಅ.19 ರ ನಾಳೆಯಿಂದ ಅಕ್ಟೋಬರ್ 21 ರವರೆಗೆ ಬಳ್ಳಾರಿ, ಬಿದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ , ಕಲಬುರಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ಯಾವೆಲ್ಲ ಸಂದರ್ಭಗಳಲ್ಲಿ ಬದಲಾಯಿಸಬಹುದು?
ಯಜಮಾನಿಯ ಸ್ಥಾನದಲ್ಲಿರುವ ಮಹಿಳೆ ನಿಧನರಾಗಿದ್ದರೆ
ಪಡಿತರ ಚೀಟಿಯಲ್ಲಿ ಪುರುಷ ಕುಟುಂಬದ ಮುಖ್ಯಸ್ಥನಾಗಿದ್ದರೆ
ಯಜಮಾನಿಯ ಸ್ಥಾನವನ್ನು ಅತ್ತೆಯಿಂದ ಸೊಸೆಗೆ ಅಥವಾ ಸೊಸೆಯಿಂದ ಅತ್ತೆಗೆ ವರ್ಗಾಯಿಸಬೇಕಾಗಿದ್ದರೆ
ಯೋಜನೆಗೆ ಇದುವರೆಗೂ ನೋಂದಾಯಿಸದೇ ಇರುವವರು ಯಜಮಾನಿಯ ಬದಲಾವಣೆ ಮಾಡಿಕೊಳ್ಳಬಹುದು.
ಸೂಚನೆ : ಯೋಜನೆಯಡಿ ಈಗಾಗಲೇ ನೋಂದಾಯಿಸಿ ಯಜಮಾನಿಯ ಬದಲಾವಣೆಗೆ ಅರ್ಜಿ ಸಲ್ಲಿಸಿದಲ್ಲಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಈ ಅರ್ಜಿ ಇತ್ಯರ್ಥಗೊಳ್ಳುವವರೆಗೂ ಗೃಹಲಕ್ಷ್ಮಿ ಯೋಜನೆಯ ಲಾಭ ತಡೆಹಿಡಿಯಲಾಗುತ್ತದೆ.