ಬೆಂಗಳೂರು: ಅನೇಕ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿ ಆಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ಗೃಹಲಕ್ಷ್ಮಿ ಯೋಜನೆ ಹಣಕ್ಕಾಗಿ ಮಹಿಳೆಯರ ಅಲೆದಾಟ ತಪ್ಪಿಸಿ ಅವರಿರುವ ಸ್ಥಳಕ್ಕೆ ಹಣ ತಲುಪಿಸಲು ಅದಾಲತ್ ನಡೆಸಲು ಸರ್ಕಾರ ಮುಂದಾಗಿದೆ. ಒಂದು ವಾರದೊಳಗೆ ರಾಜ್ಯದಲ್ಲಿ ಗೃಹಲಕ್ಷ್ಮಿ ಅದಾಲತ್ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಪಿಡಿಒ ನೆರವು ಪಡೆದು ಎಲ್ಲಾ ಅರ್ಹ ಪಲಾನುಭವಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಹಣ ತಲುಪದವರನ್ನು ಸಂಪರ್ಕಿಸಿ ಸಮಸ್ಯೆ ನಿವಾರಣೆಗೆ ತಿಳಿವಳಿಕೆ ನೀಡಲಾಗುವುದು. ಇದುವರೆಗೆ 1.10 ಕೋಟಿ ಮಹಿಳೆಯರಿಗೆ ಖಾತೆಗೆ ಹಣ ಜಮಾ ಆಗಿದೆ. ಐದಾರು ಲಕ್ಷ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದು ಬಾಕಿ ಇದೆ. ಆಧಾರ್ ಲಿಂಕ್ ಸೇರಿದಂತೆ ಹಲವು ತೊಂದರೆ ಇರುವುದರಿಂದ ಹಣ ಪಾವತಿಯಾಗದ ಮಹಿಳೆಯರ ಮಾಹಿತಿ ಪಡೆದು ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಇನ್ನು 8 ದಿನಗಳ ಒಳಗೆ ಅದಾಲತ್ ಆರಂಭಿಸಲಾಗುವುದು. ಡಿಸೆಂಬರ್ 31ರೊಳಗೆ ಎಲ್ಲರ ಖಾತೆಗೆ ಹಣ ಪಾವತಿಸುವಂತೆ ಸಿಎಂ ಸೂಚನೆ ನೀಡಿದ್ದು, ಇದರ ಅನ್ವಯ ಅದಾಲತ್ ನಡೆಸಲು ತೀರ್ಮಾನಿಸಲಾಗಿದೆ.