
ಬೆಂಗಳೂರು: ಗೃಹಜ್ಯೋತಿ ಹಣ ಸರ್ಕಾರ ಕೊಡದಿದ್ದರೆ ಗ್ರಾಹಕರಿಂದ ವಸೂಲಿ ವಿಚಾರಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.
ಗೃಹಜ್ಯೋತಿ ಹಣ ಮುಂಗಡವಾಗಿ ಎಸ್ಕಾಂಗಳಿಗೆ ಪಾವತಿ ಮಾಡಲಾಗುವುದು. ಗ್ರಾಹಕರಿಂದ ಹಣ ಪಡೆಯುವ ಯಾವುದೇ ಪ್ರಸ್ತಾಪ ಇಲ್ಲ. ರಾಜ್ಯ ಸರ್ಕಾರಕ್ಕೆ ಅಂತಹ ಯಾವುದೇ ಉದ್ದೇಶವಿಲ್ಲ. ಯೋಜನೆ ಘೋಷಣೆಯ ಸಂದರ್ಭದಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಘೋಷಿಸಲಾಗಿತ್ತು. ಸಬ್ಸಿಡಿ ಮೊತ್ತ ಸರ್ಕಾರ ಪಾವತಿಸಲಿದೆ ಎಂದು ಹೇಳಿದ್ದೆವು. ಅದರಂತೆ ಬಜೆಟ್ ನಲ್ಲಿ ಅನುದಾನ ಮೀಸಲಿಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 2025ರ ವರೆಗಿನ ಸಹಾಯಧನ ಪಾವತಿಸಿದ್ದೇವೆ. ಮುಂಗಡವಾಗಿ ಎಲ್ಲಾ ಎಸ್ಕಾಂಗಳಿಗೂ ಸಹಾಯಧನ ಪಾವತಿಸಲಾಗಿದೆ. ಕೆಇಆರ್‌ಸಿ ನಿಯಮದಲ್ಲಿ ಸರ್ಕಾರ ಹಣ ನೀಡದಿದ್ದರೆ ಜನರಿಂದ ವಸೂಲಿ ಎಂದು ನಿಯಮವನ್ನು ತಪ್ಪಾಗಿ ಅರ್ಥೈಸಲಾಗಿದೆ. ಗ್ರಾಹಕರಿಂದ ಹಣ ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಗೃಹಜ್ಯೋತಿ ಯೋಜನೆ ಮುಂದುವರಿಸಲು ಇಲಾಖೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.