ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ 1.10 ಕೋಟಿ ಮಹಿಳೆಯರಿಗೆ 2,000 ರೂ. ನೀಡಲಾಗುತ್ತಿದ್ದು, ಈವರೆಗೆ ಹಣ ಬಾರೆದೆ ಇರುವವರಿಗೆ ಸಿಎಂ ಸಿದ್ದರಾಮಯ್ಯ ಸಿಹಿಸುದ್ದಿ ನೀಡಿದ್ದಾರೆ.
ನಾಲ್ಕು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಕುರಿತಂತೆ ಸಂಬಂಧಪಟ್ಟ ಇಲಾಖೆಗಳ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನವೆಂಬರ್ ತನಕ 1.17 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದು, 1.10 ಕೋಟಿ ಫಲಾನುಭವಿಗಳಿಗೆ ನೆರವು ವರ್ಗಾವಣೆ ಮಾಡಲಾಗಿದೆ. 2 ಲಕ್ಷ ಫಲಾನುಭವಿಗಳಿಗೆ ಸಂಬಂಧಿಸಿದ ತೊಡಕು ನಿವಾರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಖಾತೆಯ ಮಾಹಿತಿಯಲ್ಲಿ ಗೊಂದಲ, ಆಧಾರ್ ಲಿಂಕ್ ಆಗದಿರುವುದು ಮೊದಲಾದ ಕಾರಣಗಳಿಂದ ಹಣ ವರ್ಗಾವಣೆಗೆ ತೊಡಕಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಫಲಾನುಭವಿಗಳನ್ನು ಬ್ಯಾಂಕಿಗೇ ಕರೆದೊಯ್ದು ಸಮಸ್ಯೆ ಬಗೆಹರಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಿ, ಎಲ್ಲ ಅರ್ಹ ಫಲಾನುಭವಿಗಳಿಗೆ ನೆರವು ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗೃಹಲಕ್ಷ್ಮಿ ಫಲಾನುಭವಿಗಳು ಬಿಟ್ಟು ಹೋಗಿದ್ದಲ್ಲಿ ಅಥವಾ ಬ್ಯಾಂಕ್ ಖಾತೆ ಆಧಾರ್ ಲಿಂಕ್ ಮತ್ತಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹ ಲಕ್ಷ್ಮಿ ಅದಾಲತ್ ಆಯೋಜಿಸಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.