ಬೆಂಗಳೂರು: ರಾಜ್ಯದ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆ ನೋಂದಣಿ ಇದೀಗ ಮತ್ತಷ್ಟು ಸರಳಗೊಂಡಿದ್ದು, ನೀವು ನೇರವಾಗಿ ಅರ್ಜಿ ಸಲ್ಲಿಸಬಹುದು. ಅರ್ಹ ಫಲಾನುಭವಿಗಳು ನೇರವಾಗಿ ತಮ್ಮ ಹತ್ತಿರದ ನೋಂದಣಿ ಕೇಂದ್ರಗಳಿಗೆ ತಮ್ಮ ದಾಖಲೆಗಳೊಂದಿಗೆ ತೆರಳಿ ಹೆಸರು ನೋಂದಾಯಿಸಿಕೊಳ್ಳಬಹುದು.
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಇದಕ್ಕೂ ಮೊದಲು ಅರ್ಹ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಮೆಸೇಜ್ (ಶೆಡ್ಯೂಲಿಂಗ್) ಬಂದರಷ್ಟೇ ನೋಂದಣಿ ಕೇಂದ್ರಗಳಿಗೆ ತೆರಳಬೇಕಿತ್ತು. ಇದೀಗ ಎಸ್ಎಂಎಸ್ ಅವಲಂಭಿಸದೇ ನೇರವಾಗಿ ನೋಂದಣಿ ಕೇಂದ್ರಗಳಿಗೆ ದಾಖಲಾತಿಗಳೊಂದಿಗೆ ತೆರಳಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.ಗೃಹ ಲಕ್ಷ್ಮಿ ನೋಂದಣಿಗೆ ಹಣ ಪಡೆದರೆ ಕ್ರಿಮಿನಸ್ ಕೇಸ್ ದಾಖಲಿಸಲಾಗುವುದು. ಸೇವಾ ಕೇಂದ್ರಗಳಲ್ಲಿ ಅಸಡ್ಡೆ ತೋರಿದರೆ ಅಂತಹವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಯಜಮಾನಿಯರು ಅರ್ಜಿ ಸಲ್ಲಿಸಲು ಇನ್ನು ಮುಂದೆ ಸ್ಲಾಟ್ ಬುಕ್ಕಿಂಗ್ ಗಾಗಿ SMS ಅನ್ನು ಕಾಯುವ ಅವಶ್ಯಕತೆ ಇಲ್ಲ. ಬದಲಾಗಿ ನೇರವಾಗಿಯೇ ಹೋಗಿ ಫಲಾನುಭವಿಗಳು ತಮಗೆ ಹತ್ತಿರದಲ್ಲಿರುವ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಸೇವಾಸಿಂಧು ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಮಹಿಳೆಯರಿಗೆ 2,000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ನಿನ್ನೆ ಒಂದೇ ದಿನ 20 ಲಕ್ಷಕ್ಕೂ ಹೆಚ್ಚು ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಒಂದು ವಾರದಲ್ಲೇ ಗೃಹಲಕ್ಷ್ಮೀ ಯೋಜನೆಗೆ ಬರೋಬ್ಬರಿ 70 ಲಕ್ಷ ಮಹಿಳೆಯರು ನೋಂದಣಿ ಮಾಡಿಸಿಕೊಂಡಂತಾಗಿದೆ. ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಜುಲೈ 26 ರ ಬುಧವಾರ ಒಂದೇ ದಿನ 20 ಲಕ್ಷಕ್ಕೂ ಹೆಚ್ಚು ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಗೃಹಲಕ್ಷ್ಮೀ ಯೋಜನೆಗೆ ರಾಜ್ಯಾದ್ಯಂತ 70 ಲಕ್ಷಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾದಂತಾಗಿದೆ ಎಂದು ವರದಿಯಾಗಿದೆ.