ರಾಯಚೂರು: ಗೃಹಲಕ್ಷ್ಮೀ ಯೋಜನೆಗೆ ಅಕ್ರಮವಾಗಿ ಜನರಿಂದ ಹಣ ಪಡೆದು ಅರ್ಜಿ ಸಲ್ಲಿಕೆ ಮಾಡುತ್ತಿದ್ದ ಮೂರು ಸೈಬರ್ ಕೇಂದ್ರಗಳ ಮೇಲೆ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ನಡೆದಿದೆ.
ಮಾನ್ವಿ ತಾಲೂಕಿನ ಮೂರು ಸೈಬರ್ ಕೇಂದ್ರಗಳಲ್ಲಿ ಗೃಹಲಕ್ಷ್ಮೀ ಯೋಜನೆಗೆ ಜನರಿಂದ 250ರಿಂದ 350 ರೂಪಾಯಿ ಹಣ ವಸೂಲಿ ಮಾಡಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಾನ್ವಿ ತಹಶೀಲ್ದಾರ್ ಚಂದ್ರಕಾಂತ್ ನೇತೃತ್ವದಲ್ಲಿ ಮೂರು ಸೈಬರ್ ಕೇಂದ್ರಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗಿದೆ.
ದಾಳಿ ವೇಳೆ ಗೃಹಲಕ್ಷ್ಮೀ ಯೋಜನೆಗೆ ಸರ್ಕಾರಿ ಐಡಿ ಪಡೆದು ಅಕ್ರಮವಾಗಿ ಅರ್ಜಿ ಸಲ್ಲಿಸುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮೂರು ಸೈಬರ್ ಕೇಂದ್ರಗಳನ್ನು ಸೀಜ್ ಮಾಡಲಾಗಿದೆ. ಅಲ್ಲದೇ ಮೂರು ಸೈಬರ್ ಕೇಂದ್ರಗಳ ವಿರುದ್ಧ ಪ್ರತ್ಯೇಕ ದೂರು ದಾಖಲಾಗಿದೆ.