ಬೆಂಗಳೂರು: ರಾಜ್ಯ ಸರ್ಕಾರದ ಗೃಹ ಆರೋಗ್ಯ ಯೋಜನೆ ಮೂಲಕ ವೈದ್ಯರ ತಂಡ ಪ್ರತಿ ಮನೆಗೆ ತೆರಳಿ ರಕ್ತದೊತ್ತಡ, ಮಧುಮೇಹ, ಮೂರು ಬಗೆಯ ಸಾಮಾನ್ಯ ಕ್ಯಾನ್ಸರ್ ಕಾಯಿಲೆ ಪರೀಕ್ಷೆ ನಡೆಸಲು ಯೋಜನೆ ಸಿದ್ಧಪಡಿಸಲಾಗಿದೆ.
ಪ್ರಾಯೋಗಿಕವಾಗಿ ಚಿಕ್ಕಮಗಳೂರು ಜಿಲ್ಲೆಯ ಹಿರೇಗೌಜ ಮತ್ತು ಲಕ್ಯ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಗೃಹ ಆರೋಗ್ಯ ಯೋಜನೆ ಆರಂಭಿಸಲಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯದ 8 ಜಿಲ್ಲೆಗಳಲ್ಲಿ ಗೃಹ ಆರೋಗ್ಯ ಯೋಜನೆ ಜಾರಿಗೊಳಿಸಲಾಗುವುದು.
ರಾಮನಗರ, ಬೆಳಗಾವಿ, ಗದಗ, ತುಮಕೂರು, ಬಳ್ಳಾರಿ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. 30 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರ ಪ್ರತಿ ಮನೆಗೆ ತೆರಳಿ ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ಪರೀಕ್ಷೆ ನಡೆಸಲಾಗುವುದು. ರೋಗಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಸಮುದಾಯ ಆರೋಗ್ಯ ಕೇಂದ್ರ ಅಥವಾ ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ತಪಾಸಣೆ ನಡೆಸಿ ಮುಂದಿನ ಚಿಕಿತ್ಸೆಗೆ ಸೂಕ್ತ ಕ್ರಮ ವಹಿಸಲಾಗುತ್ತದೆ.
ಪ್ರತಿದಿನ ಮಧ್ಯಾಹ್ನ ಮತ್ತು ಬೆಳಗಿನ ಅವಧಿಯಲ್ಲಿ ವಾರದಲ್ಲಿ ಮೂರು ದಿನ ಆರೋಗ್ಯ ಸಿಬ್ಬಂದಿ 20 ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ. ನಾಲ್ವರು ಸಿಬ್ಬಂದಿ ತಂಡವಾಗಿ ಪ್ರತಿದಿನ 20 ಮನೆಗೆ ಭೇಟಿ ನೀಡಲಿದ್ದು, ಪ್ರತಿ 15 ದಿನಕ್ಕೊಮ್ಮೆ ಶಿಬಿರ ನಡೆಸಲಾಗುವುದು.
ರಾಜ್ಯದ ಜನ ಸಾಮಾನ್ಯರ ಮನೆ ಬಾಗಿಲಿಗೆ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಗೃಹ ಆರೋಗ್ಯ ಯೋಜನೆ ಆರಂಭಿಸಲಾಗಿದೆ. ಉಚಿತವಾಗಿ ಜನರ ಮನೆ ಬಾಗಿಲಿಗೆ ಔಷಧ ಪೂರೈಸಲಾಗುವುದು.
ಬಿಪಿ, ಮಧುಮೇಹ ರೋಗಿಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಮಾಸಿಕ ಶಿಬಿರದಲ್ಲಿ ತಪಾಸಣೆ ನಡೆಸಲಾಗುವುದು. ಅಂಗನವಾಡಿ, ಶಾಲೆ, ಪಂಚಾಯಿತಿ ಕಟ್ಟಡ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿ 15 ದಿನಗಳಿಗೊಮ್ಮೆ ವೈದ್ಯಾಧಿಕಾರಿಗಳ ತಂಡ ಶಿಬಿರ ನಡೆಸಲಿದೆ.