ಬೆಂಗಳೂರು: ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದ ವೇಳೆ ಮೃತಪಟ್ಟ ಅವರ ಕುಟುಂಬಕ್ಕೆ ನೀಡುವ ಗುಂಪು ವಿಮೆ ಮೊತ್ತವನ್ನು 20 ಲಕ್ಷ ರೂ.ನಿಂದ 50 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಪ್ರಸ್ತುತ ಜಾತಿಯಲ್ಲಿರುವ ವಿಮೆ ಅವಧಿ ಮುಕ್ತಾಯವಾದ ನಂತರ ಪರಿಷ್ಕೃತ ಮೊತ್ತ ಜಾರಿಗೆ ಬರಲಿದೆ.
ಇದುವರೆಗೆ ಪೊಲೀಸ್ ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್, ಎಸ್ಐ, ಪಿಎಸ್ಐ, ಇನ್ಸ್ಪೆಕ್ಟರ್ ಹುದ್ದೆಗಳಿಗೆ ಗುಂಪು ವಿಮೆ ಮೊತ್ತ ಕೊಡಲಾಗುತ್ತಿತ್ತು. ಈಗ ಡಿವೈಎಸ್ಪಿ ಹುದ್ದೆಯಿಂದ ಡಿಜಿ ಐಜಿಪಿ ಹುದ್ದೆ ಅಧಿಕಾರಿಗಳಿಗೆ ಗುಂಪು ವಿಮೆ ಕೊಡಲು ಆದೇಶಿಸಲಾಗಿದೆ.
ಕರ್ತವ್ಯದ ಸಂದರ್ಭದಲ್ಲಿ ಆಕಸ್ಮಿಕ ಹಾಗೂ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ವಿಮೆ ಮೊತ್ತ ಪಾವತಿಸಲಾಗುವುದು. ಮಾರಣಾಂತಿಕ ಕಾಯಿಲೆ, ಹೃದಯಾಘಾತದಿಂದ ಮೃತಪಟ್ಟವರ ಕುಟುಂಬಗಳಿಗೂ ವಿಮೆ ಮೊತ್ತ ನೀಡುವ ನಿಯಮ ಜಾರಿಗೆ ತರಬೇಕೆಂದು ಪೊಲೀಸ್ ವಲಯದಿಂದ ಒತ್ತಾಯ ಕೇಳಿಬಂದಿದೆ.
ಕಳೆದ ವರ್ಷ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ವಿಮಾ ಮೊತ್ತವನ್ನು 50 ಲಕ್ಷ ರೂಪಾಯಿಗೆ ಏರಿಕೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ಅಧಿಕೃತವಾಗಿ ಆದೇಶವಾಗಿದೆ. ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಾರ್ಷಿಕ 917 ರೂ. ಪಾವತಿಸಬೇಕಿದೆ ಎಂದು ಹೇಳಲಾಗಿದೆ.