ಮಿಲಾದ್ ಉನ್ ನಬಿ ಪ್ರಯುಕ್ತ ಉಚ್ಚಿಲದಲ್ಲಿ ಮುಸ್ಲಿಂ ಸಮುದಾಯದವರು ಪಥಸಂಚಲನ ನಡೆಸುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಗಳ ತಂಡವೊಂದು ರಸ್ತೆ ಅಪಘಾತದಲ್ಲಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರನ ನೆರವಿಗೆ ದಾವಿಸಿದೆ. ಕಾಪು ಸಮೀಪದ ಮೂಳೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ಮಧ್ಯಾಹ್ನದಂದು ಈ ಘಟನೆ ಸಂಭವಿಸಿದೆ.
ಗಾಯಗೊಂಡಿದ್ದ ದ್ವಿಚಕ್ರವಾಹನ ಸವಾರನನ್ನು ಪಡುಬಿದ್ರಿ ನಿವಾಸಿ ಮಣಿಕಂಠ ಎಂದು ಗುರುತಿಸಲಾಗಿದೆ. ಪಡುಬಿದ್ರಿಯಿಂದ ಕಾಪುವಿಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮೂಳೂರು ಎಂಬಲ್ಲಿ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಮಣಿಕಂಠ ಬೈಕ್ನಿಂದ ಬಿದ್ದಿದ್ದು ಗಂಭೀರ ಗಾಯಗಳಾಗಿವೆ.
ಇದೇ ಸಂದರ್ಭದಲ್ಲಿ ಉಚ್ಚಿಲದಲ್ಲಿ ಮುಸ್ಲಿಂ ಸಮುದಾಯದ ಗುಂಪೊಂದುಮಿಲಾದ್ ಉನ್ ನಬಿ ಪ್ರಯುಕ್ತ ರಸ್ತೆಯಲ್ಲಿ ರ್ಯಾಲಿ ನಡೆಸುತ್ತಿತ್ತು. ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ರಸ್ತೆಯಲ್ಲಿ ಬಿದ್ದಿದ್ದನ್ನು ಗಮನಿಸಿದ ಈ ಗುಂಪು ಮಣಿಕಂಠನ ರಕ್ಷಣೆಗೆ ಧಾವಿಸಿದೆ. ಕೂಡಲೇ ಆಂಬುಲೆನ್ಸ್ಗೆ ಕರೆ ಮಾಡಿ ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇದಲ್ಲದೆ, ಗುಂಪು ಕೊಪ್ಪಳ ಅಂಗಡಿ ಬಳಿ ಹಿಟ್ ಅಂಡ್ ರನ್ ಘಟನೆಗೆ ಕಾರಣವಾದ ಪಿಕಪ್ ವಾಹನ ಚಾಲಕನನ್ನು ಪತ್ತೆಹಚ್ಚಿದೆ. ಸದ್ಯ ಗಾಯಾಳು ಬೈಕ್ ಸವಾರ ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.