
ಬೆಂಗಳೂರು: ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಸಲದ ಕ್ರಮವಾಗಿ ಗರಿಷ್ಠ ವಯೋಮಿತಿಯನ್ನು ಮೂರು ವರ್ಷದವರೆಗೆ ಹೆಚ್ಚಳ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್ ಬಿ, ಸಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಹಾಗೆಯೇ ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್ ಸಿ ಹುದ್ದೆಗೆ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಯಲ್ಲಿ ಈಗಿರುವ ನಿಯಮಗಳ ಮೇಲೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯನ್ನು ಮೂರು ವರ್ಷಗಳಿಗೆ ಹೆಚ್ಚಳ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.