ಬೆಂಗಳೂರು: ಮಳೆ ಕೊರತೆ ಪರಿಣಾಮ ರಾಜ್ಯದಲ್ಲಿ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ. ಇದರಿಂದಾಗಿ ಬೋರ್ವೆಲ್ ಗಳು ಬರಿದಾಗಿವೆ. 200ಕ್ಕೂ ಅಧಿಕ ತಾಲ್ಲೂಕುಗಳಲ್ಲಿ ಸಾವಿರಾರು ಕೊಳವೆ ಬಾವಿಗಳು ಬತ್ತಿದ್ದು, ಕುಡಿಯುವ ನೀರು, ಬೆಳೆ ಉಳಿಸಿಕೊಳ್ಳಲು ಪರದಾಟ ನಡೆಸುವಂತಾಗಿದೆ.
ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ ಶೇಕಡ 18 ರಷ್ಟು ಮುಂಗಾರು, ಶೇ. 36ರಷ್ಟು ಹಿಂಗಾರು ಮಳೆ ಕೊರತೆಯಾಗಿದೆ. ಅವಧಿಗೂ ಮೊದಲೇ ಹಳ್ಳ, ಕೊಳ್ಳ, ನದಿ, ಕೆರೆಕಟ್ಟೆಗಳು ಬತ್ತಿ ಹೋಗಿದ್ದು, ಅಂತರ್ಜಲ ಮಟ್ಟ ಕುಸಿತ ಕಂಡಿರುವುದರಿಂದ ಬೋರ್ವೆಲ್ ಗಳಲ್ಲಿಯೂ ನೀರು ಬತ್ತಿ ಹೋಗಿದೆ.
ಕೊಳವೆ ಬಾವಿಗಳಲ್ಲಿ ನಿರಂತರವಾಗಿ ನೀರು ಬರುತ್ತಿಲ್ಲ. ಮತ್ತೆ ಕೆಲವು ಕೊಳವೆ ಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ. 700-800 ಅಡಿವರೆಗೂ ಬೋರ್ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಬೇಸಿಗೆಯಲ್ಲಿ ಜನಜಾನುವಾರುಗಳಿಗೆ ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಎದುರಾಗಿದ್ದು, ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ನಡೆಸುವಂತಾಗಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ತಾಪ ಇನ್ನಷ್ಟು ಹೆಚ್ಚಳವಾಗಲಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ.