ಮುಂಬೈ: ಚರ್ಮದಿಂದ ಚರ್ಮ ಸ್ಪರ್ಶವಿಲ್ಲದಿದ್ದರೆ ಅದು ಲೈಂಗಿಕ ದೌರ್ಜನ್ಯವಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ದೇಹವನ್ನು ಮುಟ್ಟುವುದು, ಸವರುವುದು ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ. ಅಪ್ರಾಪ್ತೆ ಬಟ್ಟೆ ಧರಿಸಿದಾಗ ಖಾಸಗಿ ಅಂಗಗಳನ್ನು ಮುಟ್ಟಿದರೆ ಅದು ಲೈಂಗಿಕ ದೌರ್ಜನ್ಯ ಅಲ್ಲವೆಂದು ಬಾಂಬೆ ಹೈಕೋರ್ಟ್ ನಾಗಪುರ ಪೀಠ ತಿಳಿಸಿದೆ.
ಲೈಂಗಿಕ ಉದ್ದೇಶದಿಂದ ದೇಹ ಸಂಪರ್ಕ ಮಾಡುವುದರಿಂದ ಲೈಂಗಿಕ ದೌರ್ಜನ್ಯವೆಂದು ಹೇಳಲಾದ ಪ್ರಕರಣವೊಂದರ ವಿಚಾರಣೆ ನಡೆಸಿದ ಪೀಠ ಈ ಕುರಿತಾಗಿ ತೀರ್ಪು ನೀಡಿದೆ. ಅಪ್ರಾಪ್ತೆ ಬಟ್ಟೆ ಧರಿಸಿದಾಗ ಆಕೆಯ ಎದೆಯನ್ನು ಯಾರಾದರೂ ಮುಟ್ಟಿದರೆ ಅಥವಾ ಕೈ ತಾಗಿದ್ದರೆ ಅದನ್ನು ತಕ್ಷಣಕ್ಕೆ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗುವುದಿಲ್ಲ. ಬಟ್ಟೆ ತೆಗೆದು ಸ್ಪರ್ಶಿಸಿದರೆ ಅಥವಾ ಕೈ ಹಾಕಿದರೆ ಅದನ್ನು ಲೈಂಗಿಕ ದೌರ್ಜನ್ಯ ಎನ್ನಬಹುದು ಎಂದು ತಿಳಿಸಿದೆ.
ನ್ಯಾಯಾಧೀಶೆ ಪುಷ್ಪಾ ಗನೇಡಿವಾಲಾ ಅವರ ಪೀಠದಲ್ಲಿ ವಿಚಾರಣೆ ನಡೆದಿದ್ದು, ಅಪ್ರಾಪ್ತೆಯೊಂದಿಗೆ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸುವುದು, ಖಾಸಗಿ ಅಂಗಗಳನ್ನು ಲೈಂಗಿಕ ಉದ್ದೇಶದಿಂದ ಮುಟ್ಟುವುದು, ವ್ಯಕ್ತಿಯೊಬ್ಬ ಅಪ್ರಾಪ್ತೆಯಿಂದ ಖಾಸಗಿ ಅಂಗ ಸ್ಪರ್ಶಿಸಿಕೊಳ್ಳುವುದು ಪೋಕ್ಸೋ ಕಾಯಿದೆಯಡಿ ಅಪರಾಧವಾಗುತ್ತದೆ.
ಈ ಪ್ರಕರಣದಲ್ಲಿ ಆರೋಪಿ ನೇರವಾಗಿ ದೈಹಿಕ ಸಂಪರ್ಕ ಹೊಂದಿಲ್ಲ. ಆಕೆಯ ಸ್ತನ ಮುಟ್ಟಿದಾಗ ಬಟ್ಟೆ ತೆಗೆದಿಲ್ಲ. ಈ ಪ್ರಕರಣ ಪೋಕ್ಸೋ ಕಾಯ್ದೆಯಡಿ ಬರುವುದಿಲ್ಲ ಎಂದು ಹೇಳಿದ್ದಾರೆ. 12 ವರ್ಷದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 39 ವರ್ಷದ ವ್ಯಕ್ತಿಗೆ ಸೆಷನ್ಸ್ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ನಾಗಪುರ ಹೈಕೋರ್ಟ್ ಪೀಠ ಬದಲಾಯಿಸಿದೆ.