ರಾಜಸ್ಥಾನದ ಚುರು ಜಿಲ್ಲೆಯಲ್ಲಿ ವರ ಕುಡಿದು ನೃತ್ಯ ಮಾಡಿ ಬಾರಾತ್(ಮದುವೆ ಮೆರವಣಿಗೆ) ಗಂಟೆಗಳ ಕಾಲ ವಿಳಂಬ ಮಾಡಿದ್ದರಿಂದ ವಧು ಆತನನ್ನು ಮದುವೆಯಾಗಲು ನಿರಾಕರಿಸಿ ಬೇರೆ ಯುವಕನೊಂದಿಗೆ ಮದುವೆಯಾಗಿದ್ದಾಳೆ.
ರಾಜ್ ಗಢ ತಹಸಿಲ್‌ನ ಚೇಲಾನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೇ 15 ರ ಭಾನುವಾರದಂದು ವರ ಸುನೀಲ್ ಮತ್ತು ಆತನ ಸಂಬಂಧಿಕರು ವಧುವಿನ ಗ್ರಾಮಕ್ಕೆ ಆಗಮಿಸಿದ್ದರು. ರಾತ್ರಿ 9 ಗಂಟೆಗೆ ವಧುವಿನ ಮನೆಗೆ ಬಾರಾತ್ ಹೊರಟಿದೆ. ಆದರೆ, ವರ ಮತ್ತು ಅವನ ಸ್ನೇಹಿತರು ಪಾರ್ಟಿ ಮಾಡಿ ಕುಡಿದು ಡಿಜೆ ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ಮುಂದುವರೆಸಿದ್ದಾರೆ. ಇದರಿಂದಾಗಿ ಮೆರವಣಿಗೆ ಗಂಟೆಗಳ ಕಾಲ ವಿಳಂಬವಾಗಿದೆ.
ಬೆಳಿಗ್ಗೆ 1.15 ಕ್ಕೆ ಮುಹೂರ್ತ ನಿಗದಿಯಾಗಿತ್ತು. ಇದಕ್ಕೆ ಪೂರ್ವಭಾವಿ ಮದುವೆ ಶಾಸ್ತ್ರಗಳು ನಡೆಯಬೇಕಿದ್ದ ಕಾರಣ ವಿಳಂಬವಾಗಿದೆ. ಕುಡುಕ ವರನ ಕುಣಿತದಿಂದ ವಧುವಿನ ಕಡೆಯವರು ಸಾಕಾಗಿ ಹೋಗಿದ್ದಾರೆ. ವರನಿಗಾಗಿ ಕಾದು ನಿರಾಶೆಗೊಂಡ ವಧು ಬಾರಾತ್ ಹಿಂದಿರುಗಿಸಲು ನಿರ್ಧರಿಸಿದ್ದು, ನಂತರ ಆಕೆಯ ಮನೆಯವರು ಆಕೆಯನ್ನು ಬೇರೆ ಯುವಕನೊಂದಿಗೆ ಮದುವೆ ಮಾಡಲು ನಿರ್ಧರಿಸಿದ್ದಾರೆ.
ಘಟನೆಯ ಒಂದು ದಿನದ ನಂತರ, ವರನ ಕುಟುಂಬ ವಧುವಿನ ಕುಟುಂಬದ ವಿರುದ್ಧ ರಾಜ್ ಗಢ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರೊಂದಿಗೆ ಸಮಾಲೋಚನೆ ನಡೆಸಿದ ನಂತರ ಪರಿಸ್ಥಿತಿ ತಿಳಿಯಾಗಿದೆ.