ತನ್ನ ಮುದುವೆ ಬಗ್ಗೆ ನಿರಾಸಕ್ತಿ ಹೊಂದಿದ ವರನೊಬ್ಬ ಅನಾರೋಗ್ಯದ ನಾಟಕವಾಡಿದ್ದು, ಇದರಿಂದ ರೋಸಿಹೋದ ವಧುವಿನ ಕುಟುಂಬದವರು ಆತನಿಗೆ ಗೂಸಾ ಕೊಟ್ಟಿದ್ದಾರೆ.
ತೆಲಂಗಾಣದ ಜಗ್ತಿಯಾಲ್‌ನ ಫಂಕ್ಷನ್ ಹಾಲ್‌ನಲ್ಲಿ ವಧುವಿನ ಕುಟುಂಬದವರು ವರನ ಮೇಲೆ ಹಲ್ಲೆ ನಡೆಸಲು ಯತ್ನಿಸಿದಾಗ, ನಾಟಕೀಯ ಬೆಳವಣಿಗೆ ನಡೆಯಿತು.
ಹನಮಕೊಂಡದ ಅನ್ವೇಶ್ ಯುಎಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಜಗ್ತಿಯಾಲ್‌ನ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಎರಡೂ ಕುಟುಂಬದ ಹಿರಿಯರು ಆಗಸ್ಟ್‌ನಲ್ಲಿ ಜಗ್ತಿಯಾಲ್ ಜಿಲ್ಲಾ ಕೇಂದ್ರದಲ್ಲಿ ಮದುವೆ ನಡೆಸಲು ನಿರ್ಧರಿಸಿದ್ದರು. ಒಂದು ವಾರದೊಳಗೆ ಮದುವೆ ಮುಗಿಸಲು ಆತ ಒತ್ತಾಯ ಮಾಡಿದ್ದರಿಂದ 21ಕ್ಕೆ ದಿನ ನಿಗದಿಯಾಗಿತ್ತು.
ಮಾತುಕತೆ ವೇಳೆ ವಧುವಿನ ಕುಟುಂಬ ಸದಸ್ಯರು ವರದಕ್ಷಿಣೆಯಾಗಿ 25 ಲಕ್ಷ ರೂಪಾಯಿಗಳನ್ನು ನೀಡಲು ಒಪ್ಪಿಕೊಂಡು, ನಿಶ್ಚಿತಾರ್ಥದ ಸಮಯದಲ್ಲಿ 15 ಲಕ್ಷ ರೂ. ನೀಡಿದ್ದರು. ಮದುವೆ ದಿನ ಬಂದೇ ಬಿಟ್ಟಿತು, ವಧುವಿನ ಪೋಷಕರು ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದರು. ವರನಿಗೆ ವರದಕ್ಷಿಣೆಯ ಉಳಿದ ಮೊತ್ತ 10 ಲಕ್ಷ ರೂ. ನೀಡಿದ್ದರು.
ಎರಡೂ ಕಡೆಯಿಂದ ಎಲ್ಲರೂ ಎಲ್ಲವೂ ಸರಿಯಾಗಿದೆ ಎಂದು ಭಾವಿಸಿದಾಗ, ತಾನು ವಾಶ್ ರೂಂನಲ್ಲಿ ಜಾರಿ ಬಿದ್ದಿದ್ದು, ತನ್ನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ವರ ಕೇಳಿದ್ದಾನೆ. ಸಂಬಂಧಿಕರೆಲ್ಲ ಆತನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ವೈದ್ಯರು ಆತನಿಗೆ ಚಿಕಿತ್ಸೆಯನ್ನೂ ನೀಡಿದ್ದಾರೆ. ಆದರೆ ಅನ್ವೇಶ್ ಮತ್ತೊಮ್ಮೆ ಅನಾರೋಗ್ಯದಿಂದ ಬಳಲುತ್ತಿದ್ದೇನೆಂದ. ವೈದ್ಯರು ಎಲ್ಲಾ ಪರೀಕ್ಷೆಗಳನ್ನು ನಡೆಸಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಘೋಷಿಸಿದ್ದಾರೆ.
ಅನ್ವೇಶ್ ಐದು ಗಂಟೆಗಳ ಕಾಲ ಹೈ ಡ್ರಾಮಾವನ್ನು ಆಡಿದ್ದ. ಇದರಿಂದ ವಧುವಿನ ಕುಟುಂಬ ಸದಸ್ಯರು ಅವನ ನಡವಳಿಕೆ ಮತ್ತು ನಾಟಕದ ಹಿಂದಿನ ಕಾರಣ ಬಹಿರಂಗಪಡಿಸಲು ಕೇಳಿದ್ದು, ಅಂತಿಮವಾಗಿ ಆತ ಮದುವೆ ಆಗುವ ಆಸಕ್ತಿ ಇಲ್ಲ ಎಂದು ಹೇಳಿದಾಗ ಎಲ್ಲರೂ ಶಾಕ್ ಆಗಿದ್ದರು. ಎರಡೂ ಕಡೆಯ ಹಿರಿಯರು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ನಿರ್ಧರಿಸಿದ ನಂತರ ಮದುವೆ ನಿಲ್ಲಿಸಲಾಯಿತು.