ಅಯೋಧ್ಯೆಯಲ್ಲಿ ನಡೆದ ದುರಂತ ಘಟನೆಯೊಂದು ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ. ವಿವಾಹದ ಮರುದಿನವೇ ನವವಿವಾಹಿತ ದಂಪತಿ ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆಯಿಂದ ಕುಟುಂಬ ಸದಸ್ಯರು ಮತ್ತು ಅತಿಥಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ.
ಪ್ರದೀಪ್ ಮತ್ತು ಶಿವಾನಿ ವಿವಾಹದ ವಿಧಿವಿಧಾನಗಳ ನಂತರ ತಮ್ಮ ಕೋಣೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ 7 ಗಂಟೆಯವರೆಗೂ ಅವರು ಕೋಣೆಯಿಂದ ಹೊರಗೆ ಬರದಿದ್ದಾಗ ಕುಟುಂಬದವರು ಆತಂಕಗೊಂಡಿದ್ದಾರೆ. ದಂಪತಿಯನ್ನು ಎಬ್ಬಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಆತಂಕಗೊಂಡ ಕುಟುಂಬದವರು ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಅಲ್ಲಿ ಪ್ರದೀಪ್ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದರೆ, ಶಿವಾನಿ ಹಾಸಿಗೆಯ ಮೇಲೆ ನಿರ್ಜೀವವಾಗಿ ಬಿದ್ದಿದ್ದಳು. ತಕ್ಷಣವೇ ವೈದ್ಯರನ್ನು ಕರೆಸಲಾಗಿದ್ದು, ಇಬ್ಬರೂ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ. ಮದುವೆಯಲ್ಲಿ ಭಾಗವಹಿಸಿದ್ದವರನ್ನು ವಿಚಾರಣೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯಲ್ಲಿ ಶಿವಾನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಆದರೆ, ಈ ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ.
ಮಾರ್ಚ್ 7 ರಂದು ದೆಹಲಿಯ ಲೋಹಾ ಮಂಡಿಯ ಮಂಟು ರಾಮ್ ಅವರ ಪುತ್ರಿ ಶಿವಾನಿಯನ್ನು ಪ್ರದೀಪ್ ವಿವಾಹವಾಗಿದ್ದ. ಶಿವಾನಿ 8 ನೇ ತರಗತಿಯವರೆಗೆ ಓದಿದ್ದಳು. ಪ್ರದೀಪ್ ತಂದೆ ಭಗ್ಗನ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಪ್ರದೀಪ್‌ಗೆ ಇಬ್ಬರು ಸಹೋದರರು ಮತ್ತು ಮೂವರು ಸಹೋದರಿಯರು ಇದ್ದಾರೆ. ಈ ಘಟನೆಯು ಕುಟುಂಬದಲ್ಲಿ ಆಘಾತವನ್ನುಂಟುಮಾಡಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.