ಬೆಳಗಾವಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಹಲವು ಮಹಿಳೆಯರಿಗೆ, ಜೀವನಾಧಾರವಾಗಿದೆ. ಗೃಹಲಕ್ಷ್ಮೀ ಯೋಜನೆಯಿಂದ ಮನೆಯ ಯಜಮಾನಿಯರಿಗೆ ಬರುತ್ತಿರುವ ಮಾಸಿಕ 2000 ರೂಪಾಯಿ ಹಣದಿಂದ ಹಲವು ಮಹಿಳೆಯರು ಟಿವಿ, ಫ್ರಿಜ್ಡ್, ವಾಷಿಂಗ್ ಮಷಿನ್ ಖರಿದಿಸಿದ್ದಾರೆ. ಇನ್ನು ಕೆಲವರು ಬಟ್ಟೆ ಅಂಗಡಿ, ಮಗನಿಗೆ ಬೈಕ್ ಖರೀದಿ, ಮಕ್ಕಳಿಗೆ ಪಠ್ಯ-ಪುಸ್ತಕ ಖರೀದಿ, ಸೇರಿದಂತೆ ಹಲವು ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ಇಲ್ಲೋರ್ವ ಮಹಿಳೆ ಗೃಹಲಕ್ಷ್ಮೀ ಹಣದಿಂದ ಮಕ್ಕಳಿಗಾಗಿ ಗ್ರಂಥಾಲಯವನನ್ನೇ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮಂಟೂರು ಗ್ರಾಮದ ಮಹಿಳೆ ಮಲ್ಲವ್ವ ಮೇಟಿ ಎಂಬುವವರು ಗೃಹಲಕ್ಷ್ಮೀ ಯೋಜನೆ ಹಣವನ್ನು ಕೂಡಿಟ್ಟು ಮಕ್ಕಳಿಗೆ ಲೈಬ್ರರಿ ನಿರ್ಮಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಗ್ರಂಥಾಲಯ ನಿರ್ಮಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಲ್ಲವ್ವ, ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ 12 ತಿಂಗಳಿಂದ ತಮಗೆ ಗೃಹಲಕ್ಷ್ಮೀ ಯೋಜನೆ ಹಣ ಬರುತ್ತಿದೆ. ಇದರಿಂದ 26 ಸಾವಿರ ರೂಪಾಯಿ ಬಂದಿದ್ದು, ಜೊತೆಗೆ ತಾನು ಪಂಚಾಯತ್ ಮೆಂಬರ್ ಆಗಿರುವುದರಿಂದ ಅದರಿಂದ ಬಂದ ಗೌರವ ಧನ ಸೇರಿಸಿ ಒಂದು ಸಣ್ಣ ಗ್ರಂಥಾಲಯ ನಿರ್ಮಾಣ ಮಾಡಿದ್ದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಅನುಕೂಲವಾಗಲೆಂದು ಈ ಗ್ರಂಥಾಲಯ ನಿರ್ಮಿಸಿದ್ದಾಗಿ ತಿಳಿಸಿದ್ದಾರೆ. ಮಹಿಳೆಯ ಕಾರ್ಯಕ್ಕೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.