ಮೈಸೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಾದ ಮನೆಯ ಯಜಮಾನಿಗೆ 2,000 ರೂ.ನೀಡುವ ಗೃಹಲಕ್ಷ್ಮೀ ಯೋಜನೆಗೆ ಇಂದು ಅಧಿಕೃತವಾಗಿ ಚಾಲನೆ ಸಿಗಲಿದೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೆಳಗ್ಗೆ 11.30 ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಉಪಸ್ಥಿತರಿರಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವು ಸಚಿವರು ಪಾಲ್ಗೊಳ್ಳಲಿದ್ದಾರೆ.
ರಾಜ್ಯಾದ್ಯಂತ 11 ಸಾವಿರ ಕಡೆ ನೇರ ಪ್ರಸಾರ
ಗೃಹಲಕ್ಷ್ಮೀ ಯೋಜನೆ ಚಾಲನೆ ಕಾರ್ಯಕ್ರಮವನ್ನು ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲೂ ಪ್ರಚಾರಕ್ಕೆ ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. 11 ಸಾವಿರ ಕಡೆ ನೇರ ಪ್ರಸಾರ ಇರಲಿದೆ. ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲೆಗಳು ಅಥವಾ ಶಾಲಾ ಆವರಣಗಳನ್ನು ಹೊರತುಪಡಿಸಿ, ಸಮುದಾಯ ಭವನ, ಚೌಲ್ಟ್ರಿಗಳು ಹಾಗೂ ಗ್ರಾಮೀಣ ಭಾಗಗಳಲ್ಲಿರುವ ಸಭಾಂಗಣಗಳಲ್ಲಿ ಟಿವಿ ಹಾಗೂ ಎಲ್ಇಡಿ ಪರದೆ ಮೂಲಕ ಈ ಕಾರ್ಯಕ್ರಮವನ್ನು ನೇರವಾಗಿ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ವೀಕ್ಷಣೆ ಮಾಡಲು ಅಗತ್ಯ ಕ್ರಮವಹಿಸಬೇಕು. ಇದಕ್ಕಾಗಿ ಅಗತ್ಯ ಇಂಟರ್ನೆಟ್ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
1.11 ಕೋಟಿ ಮಹಿಳೆಯರ ಖಾತೆಗೆ 2,000 ರೂ. ವರ್ಗಾವಣೆ
ಗೃಹಲಕ್ಷ್ಮೀ ಯೋಜನೆಯಡಿ ಮೊದಲ ತಿಂಗಳು 1.11 ಕೋಟಿ ಪಡಿತರ ಕುಟುಂಬಗಳ ಮನೆಯೊಡತಿಗೆ ತಲಾ 2,000 ರೂ. ನಂತೆ 2,220 ಕೋಟಿ ರೂ. ನೇರ ನಗದು ವರ್ಗಾವಣೆಯಾಗಲಿದೆ.
ಗೃಹಲಕ್ಷ್ಮೀ ಯೋಜನೆಯಲ್ಲಿ ನಿಮ್ಮ ಹೆಸರು ಇದೆಯಾ ಈ ರೀತಿ ಚೆಕ್ ಮಾಡಿ
ಚೆಕ್ ಮಾಡುವ ವಿಧಾನ
1) ಮೊದಲು ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿಕೊಡಬೇಕು. https://ahara.kar.nic.in/WebForms/Show_Village_List.aspx
2) ಮೆನು ಬಾರ್ ಅಲ್ಲಿ ‘E service’ ಎನ್ನುವ ಆಯ್ಕೆ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ
3) ನಂತರ ಪೇಜ್ ನ ಎಡಭಾಗದಲ್ಲಿ ಎಲ್ಲಾ ಸೇವೆಗಳ ಲಿಸ್ಟ್ ಬರುತ್ತದೆ. ಅದರಲ್ಲಿ ಇ-ರೇಷನ್ ಕಾರ್ಡ್ ಎನ್ನುವುದನ್ನು ಸೆಲೆಕ್ಟ್ ಮಾಡಿ ಮತ್ತಷ್ಟು ಸೇವೆಗಳ ವಿವರ ಬರುತ್ತದೆ ಅದರಲ್ಲಿ ವಿಲೇಜ್ ಲಿಸ್ಟ್ ಎನ್ನುವುದನ್ನು ಕ್ಲಿಕ್ ಮಾಡಿ. ಅಲ್ಲಿ ಜಿಲ್ಲಾವಾರು ಲಿಂಕ್ ಇರುತ್ತದೆ, ಅದರಲ್ಲಿ ನಿಮ್ಮ ಜಿಲ್ಲೆ ಇರುವ ಲಿಂಕ್ ಸೆಲೆಕ್ಟ್ ಮಾಡಿ. ನಂತರ ತಾಲೂಕು, ಗ್ರಾಮ ಪಂಚಾಯತ್, ವಿಲೇಜ್ ಸೆಲೆಕ್ಟ್ ಮಾಡಿ ನಂತರ GO ಆಪ್ಶನ್ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಊರಿನ ಫಲಾನುಭವಿಗಳ ಪಟ್ಟಿ ಬರುತ್ತದೆ. ಅಲ್ಲಿ ನಿಮ್ಮ ಹೆಸರನ್ನು ಸರ್ಚ್ ಮಾಡಬಹುದು. ಒಂದು ವೇಳೆ ಪಟ್ಟಿ ಓಪನ್ ಆಗಿದ್ದರೆ ಸರ್ವರ್ ತೊಂದರೆ ಇರುತ್ತದೆ. ಸ್ವಲ್ಪ ಸಮಯದ ಬಳಿಕ ಸರ್ಚ್ ಮಾಡಿ.
ಅರ್ಜಿ ಸಲ್ಲಿಸುವು ಹೇಗೆ ?
ಫಲಾನುಭವಿಗಳು ಗ್ರಾಮ ಒನ್, ಆನ್ಲೈನ್ ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ನಾಡ ಕಚೇರಿಗಳಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸಬಹುದು. ಹಾಗೂ ಪ್ರಜಾ ಪ್ರತಿನಿಧಿ ಮೂಲಕ ಸಹ ಪೋರ್ಟಲ್ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.
ಅರ್ಜಿದಾರರು ರೇಷನ್ ಕಾರ್ಡ್ ಸಂಖ್ಯೆ, ಮನೆಯ ಯಜಮಾನಿಯ ಹಾಗೂ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕು. ತಾಯಿ ಕುಟುಂಬದ ಮುಖ್ಯಸ್ಥೆಯಾಗಿದ್ದರೆ ಮತ್ತು ಇತ್ತೀಚೆಗೆ ಅವರು ನಿಧನರಾಗಿದ್ದರೆ, ಪಡಿತರ ಚೀಟಿಯಲ್ಲಿ ಯಜಮಾನಿ ಯಾರೆಂಬುದು ಅಗತ್ಯ ತಿದ್ದುಪಡಿಯಾದ ನಂತರ ನೊಂದಾಯಿಸಬಹುದು.
ಇನ್ನು ಫಲಾನುಭವಿಗಳು ಸರ್ಕಾರಿ ವಲಯದಲ್ಲಿ ಕೆಲಸ ಮಾಡಿದ್ದರೆ, ಈಗ ಅವರು ನಿವೃತ್ತರಾಗಿ ಪಿಂಚಣಿ ಪಡೆಯುತ್ತಿದ್ದರೂ ಕೂಡ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಆದರೆ ಅವರು ಆದಾಯ ತೆರಿಗೆಯನ್ನು ಪಾವತಿಸುವವರಾಗಿರಬಾರದು.
ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಎಂದು ಘೋಷಿತರಾಗಿರುವ ಮಂಗಳಮುಖಿಯರು ಕೂಡ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಪಡಿತರ ಚೀಟಿಯಲ್ಲಿ ಪತಿಯು ಕುಟುಂಬದ ಮುಖ್ಯಸ್ಥ ಎಂದಿರುವುದನ್ನು ಕುಟುಂಬದ ಯಜಮಾನಿ ಮಹಿಳೆ ಎಂದು ಬದಲಾಯಿಸಿ ನೊಂದಾಯಿಸಿಕೊಳ್ಳಬಹುದು. ಈ ಯೋಜನೆಗೆ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಲು ಯಾವುದೇ ಗಡುವನ್ನು ನಿಗದಿ ಮಾಡಿರುವುದಿಲ್ಲ.
ಗೃಹಲಕ್ಷ್ಮಿ ಯೋಜನೆ ಕುರಿತು ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗೆ ಉಚಿತ ಟಾಲ್ಫ್ರೀ ಸಹಾಯವಾಣಿ ಸಂಖ್ಯೆ 1902 ಗೆ ಕರೆ ಮಾಡಬಹುದು.
ಸೌಲಭ್ಯಕ್ಕೆ ಯಾರು ಅರ್ಹರು?
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡುವ ಅಂತ್ಯೋದಯ, ಬಿಪಿಎಲ್, ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
ವೃದ್ದಾಪ್ಯ ವೇತನ, ವಿಧವಾ ಮಾಸಾಶನ, ವಿಶೇಷಚೇತನರ ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ಯಾವುದೇ ಮಾಸಾಶನ ಪಡೆಯುತ್ತಿದ್ದರೂ ಈ ಯೋಜನೆಯಡಿ ಮನೆಯೊಡತಿ 2 ಸಾವಿರ ರೂಪಾಯಿ ಪಡೆಯಲು ಅರ್ಹತೆ ಹೊಂದಿರುತ್ತಾಳೆ.
ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ/ಜಿಎಸ್ಟಿ ರಿಟನರ್ಸ್ ಸಲ್ಲಿಸುವವರಾಗಿದ್ದಲ್ಲಿ ಅರ್ಹರಾಗುವುದಿಲ್ಲ.