ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್ 30 ರಂದು ಮೈಸೂರಿನಲ್ಲಿ ಚಾಲನೆ ನೀಡಲಾಗುತ್ತಿದ್ದು, ರಾಜ್ಯ ಸರ್ಕಾರ ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿದೆ.
ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು ಎರಡು ಸಾವಿರ ರೂ. ಹಾಕುವ ಮೂಲಕ ಮಹಿಳಾ ಆರ್ಥಿಕ ಸಬಲೀಕರಣದತ್ತ ದಿಟ್ಟ ಹೆಜ್ಜೆ ಗೃಹಲಕ್ಷ್ಮೀ ಯೋಜನೆ. ಈ ಯೋಜನೆ ಇದೇ ಆಗಸ್ಟ್ 30ರಂದು ಮೈಸೂರಿನಲ್ಲಿ ಉದ್ಘಾಟನೆಯಾಗಲಿದೆ. ಈ ಕಾರ್ಯಕ್ರಮದ ನೇರ ಪ್ರಸಾರ ಎಲ್ಲ ಗ್ರಾಮ ಪಂಚಾಯತಿಗಳಲ್ಲಿಯೂ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆನೀಡಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರಚೀಟಿಗಳಲ್ಲಿ ನಮೂದಾಗಿರುವ ಮನೆಯ ಯಜಮಾನಿಯ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಅಥವಾ ಆಧಾರ್ ಲಿಂಕ್ ಆಗದಿರುವ ಬ್ಯಾಂಕ್ ಖಾತೆಗೆ ಆರ್‍ಟಿಜಿಎಸ್ ಮೂಲಕ ಮಾಸಿಕ ರೂ.2,000/- ವಿತರಿಸಲಾಗುತ್ತದೆ. ಆದರೆ ಕುಟುಂಬದ ಯಜಮಾನಿ, ಗಂಡ ತೆರಿಗೆ ಪಾವತಿಸುತ್ತ್ತಿದ್ದರೆ ಈ ಯೋಜನೆಯ ಲಾಭ ಪಡೆಯಲು ಬರುವುದಿಲ್ಲ. ಫಲಾನುಭವಿಗಳ ನೋಂದಣಿಯು ಹತ್ತಿರದ ಗ್ರಾಮ ಪಂಚಾಯಿತಿ ಕಚೇರಿ, ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಗ್ರಾಮದ ಪ್ರಜಾಪ್ರತಿನಿಧಿಗಳನ್ನು ನೇಮಿಸಿದೆ. ಪ್ರಜಾಪ್ರತಿನಿಧಿಗಳು ನೋಂದಣಿಗಾಗಿ ಮನೆ ಮನೆಗಳಿಗೆ ಭೇಟಿ ನೀಡುತ್ತಾರೆ. ಅವರ ಸಹಾಯದಿಂದಲೂ ನೋಂದಾಯಿಸಿಕೊಳ್ಳಬಹುದು.
ಈಗಾಗಲೇ ಮಹಿಳಾ ಫಲಾನುಭವಿಗಳನ್ನು ನೋಂದಣಿ ಮಾಡಿಸಿಕೊಂಡಿದ್ದು, ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲೆಗಳು ಅಥವಾ ಶಾಲಾ ಆವರಣಗಳನ್ನು ಹೊರತುಪಡಿಸಿ, ಸಮುದಾಯ ಭವನ, ಚೌಲ್ಟ್ರಿಗಳು ಹಾಗೂ ಗ್ರಾಮೀಣ ಭಾಗಗಳಲ್ಲಿರುವ ಸಭಾಂಗಣಗಳಲ್ಲಿ ಟಿವಿ ಹಾಗೂ ಎಲ್‍ಇಡಿ ಪರದೆ ಮೂಲಕ ಈ ಕಾರ್ಯಕ್ರಮವನ್ನು ನೇರವಾಗಿ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ವೀಕ್ಷಣೆ ಮಾಡಲು ಅಗತ್ಯ ಕ್ರಮವಹಿಸಬೇಕು. ಇದಕ್ಕಾಗಿ ಅಗತ್ಯ ಇಂಟರ್‍ನೆಟ್ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಆ. 30 ರಂದು ಮೈಸೂರಿನಲ್ಲಿ ಜರುಗುವ ರಾಜ್ಯ ಮಟ್ಟದ ಕಾರ್ಯಕ್ರಮ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಫಲಾನುಭವಿಗಳೊಂದಿಗೆ ಸಂವಾದ ನಡೆಸುವ ಸಾಧ್ಯತೆಗಳಿದ್ದು, ಇದಕ್ಕಾಗಿ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಫಲಾನುಭವಿಗಳನ್ನು ಗುರುತಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.