ಬಳ್ಳಾರಿ : ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ಹಾಗೂ ಕುಟುಂಬ ನಿರ್ವಹಣೆಯು ಉತ್ತಮ ಗುಣಮಟ್ಟದಲ್ಲಿರುವಂತಾಗಲು ಪ್ರತಿ ಕುಟುಂಬದ ಯಜಮಾನಿಗೆ ಆರ್ಥಿಕ ಬೆಂಬಲ ನೀಡುವಲ್ಲಿ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯು ಸಹಕಾರಿಯಾಗಿದೆ ಎಂದು ಯುವಜನ ಸೇವೆ, ಕ್ರೀಡಾ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು.
ಶನಿವಾರದಂದು ನಗರದ ಎಸ್.ಪಿ ವೃತ್ತದ ಬಳಿಯಿರುವ ಸ್ತ್ರೀ ಸೇವಾ ನಿಕೇತನ ಆವರಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಗೃಹಲಕ್ಷ್ಮೀ ಯೋಜನೆಯ ಕುರಿತು ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ, ಈಗಾಗಲೇ ಮೂರು ಯೋಜನೆಗಳು ಜಾರಿಗೊಂಡಿದ್ದು, ರಾಜ್ಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇದರಲ್ಲಿ ಪ್ರಮುಖ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯು ರಾಜ್ಯದ ಮಹಿಳಾ ಯಜಮಾನಿಯ ಕುಟುಂಬದ ಹೊರೆ ಕಡಿಮೆ ಮಾಡಲು ಸಹಕಾರಿಯಾಗಿದೆ. ಇಡೀ ರಾಜ್ಯವೇ ಸರ್ಕಾರವನ್ನು ಕೊಂಡಾಡುತ್ತಿದೆ ಎಂದರು.
ಗೃಹಲಕ್ಷ್ಮಿ ಯೋಜನೆಯು ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಬಿ.ಪಿ.ಎಲ್, ಎ.ಪಿ.ಎಲ್, ಅಂತ್ಯೋದಯ ಕಾರ್ಡ್ ನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000/- ಗಳನ್ನು ಡಿ.ಬಿ.ಟಿ.ಯ ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗೆ ನೀಡಲಾಗುತ್ತದೆ. ನೋಂದಣಿ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದ್ದು, ಯೋಜನೆಯ ಸೌಲಭ್ಯವನ್ನು ಎಲ್ಲ ಅರ್ಹ ಮಹಿಳೆಯರು ಪಡೆದುಕೊಳ್ಳಬೇಕು ಎಂದರು.
ಗೃಹ ಲಕ್ಷ್ಮೀ ಯೋಜನೆಗೆ ಯಾರು ಅರ್ಹರು
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವಿತರಿಸುವ ಬಿ.ಪಿ.ಎಲ್ , ಎ.ಪಿ.ಎಲ್, ಅಂತ್ಯೋದಯ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಗೆ ಫಲಾನುಭವಿಗಳಾಗಿರುತ್ತಾರೆ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿ.ಎಸ್.ಟಿ ರಿಟನ್ಸ್ ಸಲ್ಲಿಸುವರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿನ ಒಟ್ಟು ಅರ್ಹ ಪಡಿತರ ಚೀಟಿ ವಿವರ:
ಬಳ್ಳಾರಿ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಒಟ್ಟು 3,45,125 ಫಲಾನುಭವಿಗಳಿದ್ದಾರೆ. ಇದರಲ್ಲಿ ಬಳ್ಳಾರಿ ತಾಲೂಕಿನಲ್ಲಿ 1,57,433., ಸಂಡೂರು – 56,852., ಸಿರುಗುಪ್ಪ – 69,350., ಕುರುಗೋಡು – 28,495., ಕಂಪ್ಲಿ – 32,995.
*ತಾಲೂಕುವಾರು:
*ಅಂತ್ಯೋದಯ ಕಾರ್ಡ್ ವಿವರ:* ಬಳ್ಳಾರಿ ತಾಲೂಕು – 9412, ಸಂಡೂರು – 5131, ಸಿರುಗುಪ್ಪ – 6094, ಕುರುಗೋಡು – 2629, ಕಂಪ್ಲಿ – 2788, ಒಟ್ಟು 26,054.
*ಎಪಿಎಲ್ ಕಾರ್ಡ್:* ಬಳ್ಳಾರಿ ತಾಲೂಕು – 29956, ಸಂಡೂರು – 3677, ಸಿರುಗುಪ್ಪ – 4547, ಕುರುಗೋಡು – 2629, ಕಂಪ್ಲಿ – 4488, ಒಟ್ಟು 44,786.
*ಬಿಪಿಎಲ್ ಕಾರ್ಡ್:* ಬಳ್ಳಾರಿ ತಾಲೂಕು – 118065, ಸಂಡೂರು – 48044, ಸಿರುಗುಪ್ಪ – 58709, ಕುರುಗೋಡು – 23748, ಕಂಪ್ಲಿ – 25719, ಒಟ್ಟು 2,74,285.
*ನೊಂದಾವಣೆಗೆ ಬೇಕಾಗುವ ದಾಖಲೆಗಳು:
ಕುಟುಂಬದ ಯಜಮಾನಿಯ ಪಡಿತರ ಚೀಟಿ ಸಂಖ್ಯೆ, ಯಜಮಾನಿಯ ಹಾಗೂ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಯಜಮಾನಿಯ ಆಧಾರ್ ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಪಾಸ್ ಬುಕ್ ಅಥವಾ ಫಲಾನುಭವಿಯು ಇಚ್ಚಿಸಿರುವ ಪರ್ಯಾಯ ಬ್ಯಾಂಕ್ ಖಾತೆ ವಿವರ ಮಾಹಿತಿ ಅಗತ್ಯವಿದ್ದು, ನೋಂದಣಿ ಕೇಂದ್ರಕ್ಕೆ ಈ ಎಲ್ಲಾ ಮಾಹಿತಿಗಳೊಂದಿಗೆ ಹಾಜರಾಗಿ ನೊಂದಣಿ ಮಾಡಿಕೊಳ್ಳಬಹುದು.
*ನೋಂದಣಿ ಪ್ರಕ್ರಿಯೆ:*
ಜಿಲ್ಲೆಯಲ್ಲಿನ 151 ಗ್ರಾಮ ಓನ್ ಕೇಂದ್ರಗಳು ಮತ್ತು 100 ಬಾಪೂಜಿ ಸೇವಾ ಕೇಂದ್ರಗಳು ಮತ್ತು 10 ಕರ್ನಾಟಕ ಓನ್ ಸೇವಾ ಕೇಂದ್ರಗಳು ಹಾಗೂ ಬಳ್ಳಾರಿ ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಕಚೇರಿ ವಾರ್ಡ್ ಗಳು ಸೇರಿದಂತೆ ಒಟ್ಟು 75 ಕೇಂದ್ರಗಳಲ್ಲಿ ಫಲಾನುಭವಿಗಳು
ಸೇವಾಸಿಂಧು ಪೋರ್ಟಲ್ ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಫಲಾನುಭವಿಗಳು ಮೇಲ್ಕಾಣಿಸಿದ ಕೇಂದ್ರಗಳಲ್ಲದೆ ಪ್ರಜಾ ಪ್ರತಿನಿಧಿಗಳ ಮೂಲಕ ಸಹ ಸೇವಾ ಸಿಂಧು ಪೋರ್ಟಲ್ ನಲ್ಲಿ
ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಅನುಮೋದಿಸಲ್ಪಟ್ಟ ಅರ್ಹ ಫಲಾನುಭವಿಗೆ ಮಂಜೂರಾತಿ ಪತ್ರ ನೀಡಲಾಗುವುದು.
*ನೋಂದಣಿಗೆ ಸಮಸ್ಯೆಯಾದಲ್ಲಿ ಸಂಪರ್ಕಿಸಿ:*
ಸಾರ್ವಜನಿಕರು ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಯಾವುದಾದರೂ ದೂರು, ಸಮಸ್ಯೆ ಇದ್ದಲ್ಲಿ ಸರ್ಕಾರವು ಸ್ಥಾಪಿಸಿದ ಸಹಾಯವಾಣಿ ಸಂಖ್ಯೆ 1902 ಗೆ ಕರೆ ಮಾಡಿ ಸಹಾಯವನ್ನು ಪಡೆಯಬಹುದು ಹಾಗೂ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ವೇಳಾ ಪಟ್ಟಿಯ ಎಸ್.ಎಂ.ಎಸ್ ಬರದೇ ಇದ್ದಲ್ಲಿ 8147500500 ಈ ಸಂಖ್ಯೆಗೆ ಫಲಾನುಭವಿಗಳ ಪಡಿತರ ಚೀಟಿಯ ಸಂಖ್ಯೆಯನ್ನು ಎಸ್.ಎಂ.ಎಸ್ ಮಾಡುವ ಮೂಲಕ ಮಾಹಿತಿ ಪಡೆಯಬಹುದಾಗಿದೆ ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 3,45,000 ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.ಗೃಹಲಕ್ಷ್ಮಿ ಯೋಜನೆಯಡಿ ನೊಂದಾಯಿಸಿಕೊಂಡ ಇಬ್ಬರು ಮಹಿಳಾ ಫಲಾನುಭವಿಗಳಿಗೆ ಸಾಂಕೇತಿಕವಾಗಿ ನೋಂದಣಿ ಪ್ರಮಾಣ ಪತ್ರವನ್ನು ಸಚಿವರು ಇದೇ ಸಂದರ್ಭದಲ್ಲಿ ವಿತರಿಸಿದರು.
ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಹೆಚ್.ವಿಜಯಕುಮಾರ್, ಸಿಡಿಪಿಓ ನಾಗರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.