ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ದಾರಿಯಲ್ಲಿ 5 ಹ್ಯಾಂಡ್ ಗ್ರೆನೇಡ್ ಗಳು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಭೂಸೇನಾ ರೆಜಿಮೆಂಟ್ ನಲ್ಲಿ ಎಸ್ ಸಿ ಒ ಆಗಿ ನಿವೃತ್ತಿಯಾಗಿರುವ ಜಯಕುಮಾರ್ ಅವರಿಗೆ ಈ ಗ್ರೆನೇಡ್ ಗಳು ಪತ್ತೆಯಾಗಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 5 ಗ್ರೆನೆಡ್ ಗಳು ತುಕ್ಕು ಹಿಡಿದಿರುವ ಸ್ಥಿತಿಯಲ್ಲಿದೆ ಎಂದು ತಿಳಿದುಬಂದಿದೆ.
ಜಯಕುಮಾರ್ ಇಳಂತಿಲ ಬಳಿ ದಾರಿಯಲ್ಲಿ ಹೋಗುತ್ತಿದ್ದಾಗ ಪ್ಲಾಸ್ಟಿಕ್ ಕವರಿನಲ್ಲಿ 5 ಹ್ಯಾಂಡ್ ಗ್ರೆನೇಡ್ ಗಳು ಪತ್ತೆಯಾಗಿದ್ದು, ಅವುಗಳನ್ನು ಮನೆ ಅಂಗಳದಲ್ಲಿಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ಗ್ರೆನೇಡ್ ಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಕೈಗೊಂಡಿದ್ದಾರೆ.