ಮಾಲೀಕರಿಲ್ಲದ ಬೀದಿಬದಿ ಪ್ರಾಣಿಗಳು ಜನರ ಮೇಲೆ ದಾಳಿ ಮಾಡುವ ಪ್ರಕರಣಗಳು ದೇಶಾದ್ಯಂತ ವರದಿಯಾಗುತ್ತಿರುತ್ತವೆ. ಬೀಡಾಡಿ ದನಗಳ ಹಾವಳಿಗೆ ಸಿಕ್ಕಿ ಅನೇಕರು ಪ್ರಾಣ ಕಳೆದುಕೊಂಡಿರುವ ಪ್ರಕರಣಗಳೂ ಇವೆ. ಇದೀಗ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ ದಾದ್ರಿಯಿಂದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಶಾಲಾ ಬಾಲಕಿ ಮೇಲೆ ಬೀಡಾಡಿ ದನ ಹಾವಳಿ ಮಾಡಿದೆ.
ಅದೃಷ್ಟವಶಾತ್ ಬಾಲಕಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾದ್ರಿಯ ಟೀಚರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಘಟನೆ ಸೆರೆಯಾಗಿದೆ. ರಸ್ತೆ ಬದಿ ನಿಂತಿದ್ದ ಬೀಡಾಡಿ ಗೂಳಿ ಬಾಲಕಿಯ ಮೇಲೆ ಕೊಂಬಿನಿಂದ ದಾಳಿ ನಡೆಸಿದೆ. ತಕ್ಷಣ ಬಾಲಕಿ ಕೆಳಗೆ ಬಿದ್ದು ಗಾಯಗೊಂಡಿದ್ದಾಳೆ.
ಈ ಘಟನೆಯು ಸ್ಥಳೀಯ ಪ್ರದೇಶದಲ್ಲಿ ಭಯ ಮೂಡಿಸಿದ್ದು ಬೀಡಾಡಿ ದನಗಳನ್ನು ಗೋಶಾಲೆಗಳಿಗೆ ಕಳುಹಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಪ್ರದೇಶದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಇಂತಹ ಘಟನೆಗಳನ್ನು ತಡೆಯಲು ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.
ದಾದ್ರಿಯ ವಾರ್ಡ್ ಕೌನ್ಸಿಲರ್ ಹರೀಶ್ ರಾವಲ್ ಅವರು ದಾದ್ರಿ ಪುರಸಭೆಗೆ ಲಿಖಿತ ದೂರು ನೀಡಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಮತ್ತು ಆ ಪ್ರದೇಶದಲ್ಲಿನ ಎಲ್ಲಾ ಬಿಡಾಡಿ ದನಗಳನ್ನು ಗೋಶಾಲೆಗೆ ಕಳುಹಿಸುವಂತೆ ಕೋರಿದ್ದಾರೆ ಎಂದು ವರದಿಯಾಗಿದೆ.