ಬೆಂಗಳೂರು : ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಈ ಹಿನ್ನೆಲೆ 5675 ಹೊಸ ಬಸ್ ಖರೀದಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಸಾರಿಗೆ ಇಲಾಖೆಯ ರಾಜಸ್ವ ಗುರಿ ಹಾಗೂ ಸಾರಿಗೆ ನಿಗಮಗಳ ಹಣಕಾಸು ನಿರ್ವಹಣೆ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಪ್ರಸಕ್ತ ಆಯವ್ಯಯದಲ್ಲಿ ಹೊಸ ಬಸ್ ಗಳ ಖರೀದಿಗೆ 500 ಕೋಟಿ ರೂ. ಒದಗಿಸಲಾಗಿದ್ದು, ಖರೀದಿ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ.
ಶಕ್ತಿ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಪ್ರಯಾಣಿಕರ ಸಂಖ್ಯೆ ಶೇ.15 ರಷ್ಟು ಹೆಚ್ಚಾಗಿದೆ. ಈ ಮೂಲಕ ಹೆಚ್ಚುವರಿ ಶೆಡ್ಯೂಲ್ ಗಳನ್ನು ಸೇರಿಸಲು ಅನುಕೂಲವಾಗುವಂತೆ ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಹೊಸ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ಚುನಾವಣೆ ಮುನ್ನ ಸರಕಾರ ನೀಡಿದ 5 ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಹಿಳಾ ಭಕ್ತರ ಸಂಖ್ಯೆ ಹೆಚ್ಚಳದಿಂದಾಗಿ ದೇಗುಲಗಳ ಆದಾಯವೂ ಭರ್ಜರಿಯಾಗಿದೆ.