
ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದ. ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದ ವೇಳೆ ವ್ಯಕ್ತಿಯ ಅಜ್ಜ, ಚಿತೆಗೆ ಹಾರಿ ಸಾವಿಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ.
ಬಹ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ಅಭಯ್ ರಾಜ್ ಯಾದವ್ ತನ್ನ ಪತ್ನಿ ಸವಿತಾಳನ್ನು ಕೊಡಲಿಯಿಂದ ಕಡಿದು ಕೊಂದು ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ.
ಇಬ್ಬರ ಅಂತ್ಯಕ್ರಿಯೆಯನ್ನು ನಡೆಸಲಾಗಿತ್ತು. ಈ ವೇಳೆ ಅಭಯ್ ರಾಜ್ ಅಜ್ಜ, ರಾಮಾವತಾರ್ ಯಾದವ್, ಮೊಮ್ಮಗನ ಚಿತೆಗೆ ಹಾರಿ ಪ್ರಾಣಬಿಟ್ಟಿದ್ದಾರೆ. ಮೊಮ್ಮಗ ಹಾಗೂ ಸೊಸೆಯ ಅಂತ್ಯಕ್ರಿಯೆ ವೇಳೆ ಅಜ್ಜ ಮನೆಯಲ್ಲಿಯೇ ಇದ್ದರು. ಸಂಬಂಧಿಕರು ಅಂತ್ಯಕ್ರಿಯೆ ನೆರವೇರಿಸಿ ವಾಪಾಸ್ ಮನೆಗೆ ಬಂದು ನೋಡಿದರೆ ಅಜ್ಜ ನಾಪತ್ತೆಯಾಗಿದ್ದರು. ಎಲ್ಲೆಡೆ ಹುಡುಕಾಡಿ ಬಳಿಕ ಮೊಮ್ಮಗನ ಅಂತ್ಯಕ್ರಿಯೆ ನೆರವೇರಿಸಿದ್ದ ಸ್ಥಳಕ್ಕೆ ಬಂದು ನೋಡಿದಾಗ ಮೊಮ್ಮಗನ ಚಿತೆಯಲ್ಲಿ ತಾತನ ಅರೆಬೆಂದ ಮೃತದೇಹ ಪತ್ತೆಯಾಗಿದೆ.
ಮೊಮ್ಮಗನ ಚಿತೆಗೆ ಹಾರಿ ತಾತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಅಭಯ್ ರಾಜ್ ಯಾದವ್ ತನ್ನ ಪತ್ನಿ ಸವಿತಾಳನ್ನು ಹತ್ಯೆಗೈಯ್ಯಲು ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.