ಅಜ್ಜ- ಅಜ್ಜಿ ಮತ್ತು ಮೊಮ್ಮಕ್ಕಳ ನಡುವೆ ವಿಶೇಷ ಬಾಂಧವ್ಯ ಇರುತ್ತದೆ. ವಿಶೇಷ ಕಾಳಜಿ, ಆತ್ಮೀಯತೆ ಹಾಸು ಹೊಕ್ಕಾಗಿರುತ್ತದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ವಿಡಿಯೋದಲ್ಲಿ ಮೊಮ್ಮಗಳ ಮದುವೆ ಸಂಭ್ರಮದಲ್ಲಿರುವ ವೃದ್ಧರೊಬ್ಬರು ಭಾವುಕರಾಗಿರುವುದು ಕಾಣಿಸುತ್ತದೆ. ಮೊಮ್ಮಗಳ ಅಪ್ಪುಗೆ ಅವರಲ್ಲಿ ಖುಷಿಯ ಕಣ್ಣೀರು ತರಿಸುತ್ತದೆ.
ಮದುವೆಯ ದಿನ ಮೊಮ್ಮಗಳ ಜೊತೆ ಹಣ್ಣುಹಣ್ಣು ಅಜ್ಜ ಡ್ಯಾನ್ಸ್ ಮಾಡಿರುವ ವಿಡಿಯೋ ನೋಡುಗರಿಗೆ ಕಣ್ಣೀರು ತರಿಸಲೂ ಬಹುದು. ಯೂ ಆರ್ ಮೈ ಸನ್ಶೈನ್ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಂತೆ ಒಬ್ಬರನ್ನೊಬ್ಬರು ಅಪ್ಪಿಕೊಂಡರು. ಅಜ್ಜ ಮತ್ತು ಮೊಮ್ಮಗಳ ನಡುವಿನ ಈ ಸುಂದರವಾದ ನೃತ್ಯವನ್ನು ನೋಡಿದ ನಂತರ ಮದುವೆಗೆ ಬಂದ ಅತಿಥಿಗಳು ಸಹ ಕಣ್ಣೀರು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ.
ಈ ವೀಡಿಯೊವನ್ನು ಆರಂಭದಲ್ಲಿ ವಧು ಮತ್ತು ವರನ ಮದುವೆಯ ಫೋಟೋಗ್ರಾಫರ್ ಹಂಚಿಕೊಂಡಿದ್ದಾರೆ. ನಂತರ, ಇದನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ವೀಡಿಯೋ 2 ಮಿಲಿಯನ್ಗೂ ಹೆಚ್ಚು ವೀಕ್ಷಣೆಯನ್ನು ಹೊಂದಿದೆ.
“ಅಜ್ಜ ಮತ್ತು ಮೊಮ್ಮಗಳ ನಡುವಿನ ಸುಂದರ ಕ್ಷಣ” ಎಂದು ವೀಡಿಯೊ ಶೀರ್ಷಿಕೆ ಇದೆ. ಇದನ್ನು ಕಂಡ ನೆಟ್ಟಿಗರು ತಮ್ಮ ಅಜ್ಜ – ಅಜ್ಜಿಯರ ನೆನಪು ಮಾಡಿಕೊಂಡು ಭಾವುಕರಾಗಿದ್ದಾರೆ.